ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹದಗೆಟ್ಟ ರಸ್ತೆಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಕಂಡ ಗ್ರಾಮಸ್ಥರು ಚಂದಾ ಹಾಕಿ ಹದಗೆಟ್ಟ ರಸ್ತೆಯನ್ನು ದುರಸ್ತಿ ಪಡಿಸಿಕೊಂಡ ಅಪರೂಪದ ಪ್ರಸಂಗ ತಾಲೂಕಿನ ಸಂಪಿಗೆಪುರದಲ್ಲಿ ನಡೆದಿದೆ.ಸಂಪಿಗೆಪುರ-ಕಬ್ಬಹಳ್ಳಿಗೆ ಸಂಪರ್ಕ ಕಲ್ಪಿಸುವ ಸುಮಾರು ೨ ಕಿಮೀನಷ್ಟು ಉದ್ದದ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗಿತ್ತು. ಬಸ್ ಹಾಗೂ ಶಾಲಾ ವಾಹನಗಳು ಸಂಪಿಗೆಪುರದಿಂದ ಕಬ್ಬಹಳ್ಳಿಗೆ ಬರೋ ತನಕ ವಾಹನಗಳ ಸವಾರರು ಪರದಾಡುತ್ತಿದ್ದರು. ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳು ಬಿದ್ದಿದ್ದವು. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಎಲ್ಲಿ ಮಗಚಿ ಬೀಳಲಿವೆ ಎಂಬ ಆತಂಕ ಸವಾರರಲ್ಲಿ ಇತ್ತು. ರಸ್ತೆಯ ಅವ್ಯವಸ್ಥೆಯ ಬಗ್ಗೆ ಶಾಸಕರು, ಜಿಪಂ ಮಾಜಿ ಸದಸ್ಯರು, ಗ್ರಾಪಂ ಸದಸ್ಯರ ಗಮನಕ್ಕೆ ಗ್ರಾಮಸ್ಥರು ತಂದರೂ ರಸ್ತೆ ಮಾತ್ರ ಅಭಿವೃದ್ಧಿ ಆಗಲಿಲ್ಲ.
ಈ ರಸ್ತೆಯ ದುಸ್ಥಿತಿ ಕಂಡ ಗ್ರಾಮಸ್ಥರು ಸಂಪಿಗೆಪುರದಿಂದ ಕಬ್ಬಹಳ್ಳಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳ ಬವಣೆ ಕಂಡು ಗ್ರಾಮದ ಕೆಲ ಪ್ರಮುಖರು ಚರ್ಚಿಸಿ, ಬಳಿಕ ವಂತಿಗೆ ಹಾಕಲು ತೀರ್ಮಾನಿಸಿದರು. ಗ್ರಾಮಸ್ಥರೆಲ್ಲ ತಮ್ಮ ಕೈಲಾದಷ್ಟು ಹಣವನ್ನು ಕೊಟ್ಟರು. ಬಳಿಕ ಸುಮಾರು ೩೦ಕ್ಕೂ ಹೆಚ್ಚು ಟ್ರ್ಯಾಕ್ಟರ್‌ನಷ್ಟು ಜೆರಬು ಮಣ್ಣು ರಸ್ತೆಗೆ ಸುರಿಸಿ, ಹಳ್ಳ ಕೊಳ್ಳಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಿಸಿದ್ದಾರೆ.ಗ್ರಾಮಸ್ಥರೆಲ್ಲ ರಸ್ತೆಯಲ್ಲಿ ನಿಂತು ಮಣ್ಣು ಹಾಕಿದ ಬಳಿಕ ಜೆಸಿಬಿ ಮೂಲಕ ಮಣ್ಣು ಚೆಲ್ಲಿ ರಸ್ತೆ ಶ್ರಮದಾನದ ಮೂಲಕ ಸಮತಟ್ಟು ಮಾಡಿ ರಸ್ತೆ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಗ್ರಾಮದ ಯುವಕ ಸೋಮು ಕನ್ನಡಪ್ರಭದೊಂದಿಗೆ ಮಾತನಾಡಿ, ಕಬ್ಬಹಳ್ಳಿ-ಸಂಪಿಗೆಪುರ ರಸ್ತೆಯ ಅಭಿವೃದ್ಧಿಗೆ ಶಾಸಕರು ಇನ್ನಾದರೂ ಗಮನ ಕೊಡಲಿ. ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ. ಸಂಪಿಗೆಪುರ-ಕಬ್ಬಹಳ್ಳಿ ರಸ್ತೆಯ ಅವ್ಯವಸ್ಥೆ ಕಂಡು ಗ್ರಾಮಸ್ಥರು ಚಂದಾ ಹಾಕಿದ್ದು, ಚಂದಾ ಹಣದಲ್ಲಿ ೩೫ ಟ್ರ್ಯಾಕ್ಟರ್‌ನಷ್ಟು ಜೆರಬು ಮಣ್ಣು ಹಾಕಿಸಿ ರಸ್ತೆಗೆ ಸುರಿದು ಸಮತಟ್ಟು ಮಾಡಲಾಗಿದೆ ಎಂದರು.ರಸ್ತೆ ಹಾಳಾಗಿರುವ ಬಗ್ಗೆ ಶಾಸಕರು, ಜಿಪಂ ಮಾಜಿ ಸದಸ್ಯರು, ಗ್ರಾಪಂ ಸದಸ್ಯರ ಗಮನಕ್ಕೆ ತಂದರೂ ರಸ್ತೆ ದುರಸ್ತಿ ಮಾಡಿಸಲಿಲ್ಲ. ಇದರಿಂದ ರೋಸಿ ಹೋದ ಗ್ರಾಮಸ್ಥರೆಲ್ಲರು ಸ್ವಂತ ಹಣ ನೀಡಿ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ. ಶಾಸಕರು ಸಂಪಿಗೆಪುರ ಗ್ರಾಮದ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿಸಲಿ.
ಸೋಮು, ಸಂಪಿಗೆಪುರ ಗ್ರಾಮಸ್ಥ