ತೆಲಂಗಾಣಕ್ಕೆ ನೀರು ಹರಿಸದಿರಲು ಆಗ್ರಹಿಸಿ ಪ್ರತಿಭಟನೆ

| Published : Feb 21 2025, 12:50 AM IST

ತೆಲಂಗಾಣಕ್ಕೆ ನೀರು ಹರಿಸದಿರಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಲಂಗಾಣ ರಾಜ್ಯಕ್ಕೆ 5 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ, ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ತೆಲಂಗಾಣ ರಾಜ್ಯಕ್ಕೆ 5 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ, ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯ ಎಂಜಿನಿಯರ್ ಡಿ.ಬಸವರಾಜ ಮನವಿ ಸಲ್ಲಿಸಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತೆಲಂಗಾಣ ಸರ್ಕಾರ 5 ಟಿಎಂಸಿ ನೀರನ್ನು ಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರಬರೆದಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರ ಇದೆ. ರಾಜಕೀಯ ಹಿತದೃಷ್ಟಿಯಿಂದ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೀರು ಹರಿಸಿದರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯಗಳಲ್ಲಿ ಕುಡಿಯುವ ನೀರು, ಜಲಚರ, ನೀರು ಆವಿ ಆಗುವಿಕೆ, ಕೈಗಾರಿಕೆ, ವಿದ್ಯುತ್ ಸ್ಥಾವರಗಳು ಮತ್ತಿತರ ಬಳಕೆಗೆ ಕನಿಷ್ಟ 35 ಟಿಎಂಸಿ ಅಡಿ ನೀರು ಕಾಯ್ದಿರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕಾಗುತ್ತದೆ. ಆದರೆ ಸದ್ಯ ಸಂಗ್ರಹವಿರುವ ನೀರಿನಲ್ಲಿ ಹಿಂಗಾರು ಹಂಗಾಮಿಗೆ ನೀರು ಪೂರೈಸಿ ಅಷ್ಟು ಪ್ರಮಾಣದಲ್ಲಿ ನೀರು ಉಳಿಯುವುದೇ ಅನುಮಾನ. ಹೀಗಾಗಿ ಯಾವುದೇ ಕಾರಣಕ್ಕೂ ತೆಲಂಗಾಣಕ್ಕೆ ನೀರು ಹರಿಸಬಾರದು ಎಂದರು.

ಒಂದು ವೇಳೆ ನೀರು ಹರಿಸಿದರೇ ಜಿಲ್ಲೆಯ ಜನ, ಜಾನುವಾರುಗಳು ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲದೇ ಪರದಾಡಬೇಕಾಗುತ್ತದೆ. ಬೇಸಿಗೆ ಬಂತೆಂದರೇ ತೆಲಂಗಾಣ ಹಾಗೂ ಆಂಧ್ರ ರಾಜ್ಯಗಳಿಗೆ ಆಲಮಟ್ಟಿ ಅಣೆಕಟ್ಟಿನ ನೀರಿನ ನೆನಪಾಗುತ್ತದೆ. ಆದರೆ ಆಲಮಟ್ಟಿ ಜಲಾಶಯ ಎತ್ತರಕ್ಕೆ ಎರಡೂ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತವೆ. ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಆಲಮಟ್ಟಿ ಜಲಾಶಯ ಎತ್ತರವಾಗದಂತೆ ಹಾಕಿರುವ ವಿವಿಧ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದು ಜಲಾಶಯದ ಎತ್ತರಕ್ಕೆ ಸಮ್ಮತಿ ನೀಡಲಿ ಎಂದರು.

ಒಂದು ವೇಳೆ ಯಾರಿಗೂ ಗೊತ್ತಾಗದಂತೆ ನೀರು ಹರಿಸದರೇ ಮುಖ್ಯ ಎಂಜಿನಿಯರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಆಲಮಟ್ಟಿ ಜಲಾಶಯದ ಹೊರಹರಿವಿನ ಮೇಲೆ ನಿರಂತರ ನಿಗಾ ಇಡಲಾಗುವುದು ಎಂದರು. ಬಸವನಬಾಗೇವಾಡಿ ಘಟಕ ಅಧ್ಯಕ್ಷ ಉಮೇಶ ವಾಲಿಕಾರ, ಹೊನಕೇರೆಪ್ಪ ತೆಲಗಿ, ಪ್ರಹ್ಲಾದ ನಾಗರಾಳ, ವಿಠ್ಠಲ ಬಿರಾದಾರ, ಲಾಲಸಾಬ್ ಹಳ್ಳೂರ, ಶೆಟ್ಟೆಪ್ಪ ಲಮಾಣಿ, ಹಣಮಂತ ಕಲಬುರ್ಕಿ, ರಾಮನಗೌಡ ಹಾದಿಮನಿ, ಯಮನಪ್ಪ ಸರೂತ, ಸಾಹೇಬಗೌಡ ಹೊಸೂರ ಇದ್ದರು.