ಅನಧಿಕೃತ ಆಸ್ತಿ ಇ-ಖಾತಾ ಅವಕಾಶ ಅಕ್ರಮವಾಗದಂತೆ ತಡೆಯಬೇಕು: ರವಿರಾಜ ಅಂಕೋಲೇಕರ

| Published : Feb 21 2025, 12:50 AM IST

ಅನಧಿಕೃತ ಆಸ್ತಿ ಇ-ಖಾತಾ ಅವಕಾಶ ಅಕ್ರಮವಾಗದಂತೆ ತಡೆಯಬೇಕು: ರವಿರಾಜ ಅಂಕೋಲೇಕರ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ಮೊದಲ ಬಾರಿಗೆ ಎರಡುಪಟ್ಟು ಪಾವತಿಸಿ, ಆಸ್ತಿಯ ಮಾಲೀಕತ್ವದ ದಾಖಲೆಗಳು, ತೆರಿಗೆ ಪಾವತಿ ಚಲನಗಳು, ಋಣಭಾರ ಪ್ರಮಾಣ ಪತ್ರ, ಮಾಲೀಕರ ಗುರುತಿನ ದಾಖಲೆ, ಸ್ವತ್ತಿನ ಫೋಟೋ, ಮಾಲೀಕರ ಪೋಟೋ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ.

ಕಾರವಾರ: ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಪಡೆಯಲು ರಾಜ್ಯ ಸರ್ಕಾರ ಮೂರು ತಿಂಗಳ ಅವಕಾಶ ನೀಡಿದ್ದು, ನಗರಸಭೆಯಿಂದ ಪ್ರಚಾರ ಮಾಡಲಾಗುತ್ತಿದೆ. ಎಲ್ಲ ಸದಸ್ಯರು ಕೂಡಾ ಇ-ಖಾತಾ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಇಲ್ಲಿನ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಹೇಳಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸೆ. ೧೦, ೨೦೨೪ರ ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ಮೊದಲ ಬಾರಿಗೆ ಎರಡುಪಟ್ಟು ಪಾವತಿಸಿ, ಆಸ್ತಿಯ ಮಾಲೀಕತ್ವದ ದಾಖಲೆಗಳು, ತೆರಿಗೆ ಪಾವತಿ ಚಲನಗಳು, ಋಣಭಾರ ಪ್ರಮಾಣ ಪತ್ರ, ಮಾಲೀಕರ ಗುರುತಿನ ದಾಖಲೆ, ಸ್ವತ್ತಿನ ಫೋಟೋ, ಮಾಲೀಕರ ಪೋಟೋ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಸದಸ್ಯ ಸಂದೀಪ ತಳೇಕರ ಮಾತನಾಡಿ, ಸರ್ಕಾರ ಒಳ್ಳೆಯ ಯೋಜನೆ ತಂದಿದೆ. ಮಧ್ಯವರ್ತಿಗಳು ಭಾಗಿಯಾಗುವ ಹಾಗೂ ಭ್ರಷ್ಟಾಚಾರವಾಗುವ ಸಾಧ್ಯತೆಯಿದೆ. ಹೀಗಾಗಿ ಸದಸ್ಯರನ್ನೊಳಗೊಂಡ ಸಮಿತಿ ಮಾಡಬೇಕು. ಮಧ್ಯವರ್ತಿ ಹಾವಳಿ ತಪ್ಪಿಸಬೇಕು. ಜನರಿಗೆ ಯಾವುದೇ ತೊಂದರೆ ಇಲ್ಲದೆ ಕೆಲಸವಾಗುವಂತೆ ಆಗಬೇಕು ಎಂದು ಅಭಿಪ್ರಾಯಿಸಿದರು. ಇದಕ್ಕೆ ಸದಸ್ಯರಾದ ಮಕ್ಬುಲ್ ಶೇಖ್, ಪ್ರೇಮಾನಂದ ಗುನಗಿ ಇತರರು ಧ್ವನಿಗೂಡಿಸಿದರು.

ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ನಿಮ್ಮ ನಿಮ್ಮ ವಾರ್ಡಿನಿಂದ ಅರ್ಜಿ ಸಂಖ್ಯೆಯನ್ನು ವಾರಕ್ಕೊಮ್ಮೆ ನೀಡುತ್ತೇವೆ. ಸದಸ್ಯರಿಗೆ ದಾಖಲೆಗಳನ್ನು ನೋಡುವ ಅಧಿಕಾರವಿಲ್ಲ. ಜತೆಗೆ ಮೂರು ತಿಂಗಳು ಮಾತ್ರ ಅವಕಾಶವಿರುವುದರಿಂದ ಬೇಗ ಪ್ರತಿಕ್ರಿಯೆ ಪೂರ್ಣಗೊಳಿಸಬೇಕಿದೆ. ಈಗಾಗಲೇ ಇದಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಜತೆಗೆ ಅರ್ಜಿಯನ್ನು ಎಲ್ಲೋ ನೀಡಲು ಅವಕಾಶವಿಲ್ಲ. ನಗರಸಭೆಗೆ ನೀಡಬೇಕು. ಹೀಗಾಗಿ ಅಕ್ರಮ, ಮಧ್ಯವರ್ತಿಗಳ ಹಾವಳಿ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಶೀದ್ ಮಾತನಾಡಿ, ಕಾರವಾರ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಅಮೃತ ೨.೦ ಯೋಜನೆಯಡಿ ₹೩೫ ಕೋಟಿ ಅನುದಾನ ಮಂಜೂರಾಗಿದೆ. ಸಿಎಂಸಿಯಿಂದ ನೀರು ಸರಬರಾಜು ಮಾಡಲು ಇರುವ ಸಮಸ್ಯೆ ಮಾಹಿತಿ ಪಡೆದು ಸರಿಪಡಿಸಲು ಕ್ರಮವಹಿಸಲಾಗುತ್ತದೆ ಎಂದ ಅವರು ಯೋಜನೆಯ ನೀಲನಕ್ಷೆ ಬಗ್ಗೆ ವಿವರಿಸಿದರು.

ಸದಸ್ಯ ಮಕ್ಬುಲ್ ಶೇಖ್, ಕಾರವಾರ ನಗರಕ್ಕೆ ದೂರದ ಗಂಗಾವಳಿ ನದಿ ನೀರಿನ ಮೂಲವಾಗಿದೆ. ಇದರ ಬದಲು ಕಾಳಿ ನದಿ ಸಮೀಪ ಇರುವುದರಿಂದ ಇದರಿಂದ ಯೋಜನೆ ರೂಪಿಸಬೇಕು. ಗಂಗಾವಳಿಯಿಂದ ನೌಕಾನೆಲೆ, ಗ್ರಾಸಿಂ ಇಂಡಸ್ಟ್ರಿ, ಹಳ್ಳಿಗಳಿಗೆ ಪೂರೈಕೆ ಕೂಡಾ ಆಗುತ್ತದೆ. ಇದರಿಂದ ಬೇಸಿಗೆಯಲ್ಲಿ ನೀರು ಪೂರೈಕೆಗೆ ತೊಂದರೆ ಅಗುತ್ತದೆ. ಮುಂದಿನ ದಿನದಲ್ಲಿ ನೌಕಾನೆಲೆ ಕಾರವಾರ ನಗರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದುತ್ತದೆ. ಆಗ ಮತ್ತಷ್ಟು ಸಮಸ್ಯೆ ಉಲ್ಬಣವಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಶೀದ್, ಗಂಗಾವಳಿಯಲ್ಲಿ ನೀರು ಇರುವ ಮೂಲ ಖಚಿತಪಡಿಸಿಕೊಂಡು ಬ್ಯಾರಲ್ ನಿರ್ಮಾಣ ಮಾಡಲಾಗುತ್ತಿದೆ. ಇದಾದರೆ ಬೇಸಿಗೆಯಲ್ಲಿ ಸಮಸ್ಯೆ ಉಂಟಾಗುವುದಿಲ್ಲ ಎಂದರು. ಸುದೀರ್ಘ ಚರ್ಚೆ ಬಳಿಕ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಸದಸ್ಯರು, ಅಧಿಕಾರಿಗಳು ಇದ್ದರು.