ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಸಸಿಹಿತ್ಲು ಕ್ಷೇತ್ರದಲ್ಲಿ 30 ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಇತ್ತೀಚೆಗೆ ನೆರವೇರಿತು.

ಮೂಲ್ಕಿ: ಸಸಿಹಿತ್ಲು ದೇವಳದ ಬ್ರಹ್ಮಕಲಶೋತ್ಸವವು ಕಟೀಲು ದೇವಳದ ಬ್ರಹ್ಮಕಲಶೋತ್ಸವದಂತೆ ಮಾದರಿ ಆಗಬೇಕು. ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆ, ಧನಸಂಗ್ರಹಕ್ಕೆ ಹೊಸ ಪರಿಕಲ್ಪನೆ, ಪ್ರಚಾರದ ಫ್ಲೆಕ್ಸ್‌ನಲ್ಲಿ ಏಕರೂಪದ ಲಾಂಛನ, ವ್ಯಕ್ತಿಗಳ ಹೆಸರು ಸಾಕು, ಫೋಟೊ ಹಾಕುವುದು ಬೇಡ. ಎಲ್ಲಾ ಸಮಿತಿಗಳು ಜನವರಿ 15 ರ ಒಳಗೆ ಕಾರ್ಯಯೋಜನೆ ಅಂತಿಮಗೊಳಿಸಬೇಕೆಂದು ಮಾಜಿ ಸಂಸದ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಸಸಿಹಿತ್ಲು ಕ್ಷೇತ್ರದಲ್ಲಿ ನಡೆದ 30 ವಿವಿಧ ಸಮಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷೆಯನ್ನು ವಹಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸದ ನೆನಪಿಗಾಗಿ ಭೂದಾನ ಸೇವಾ ಯೋಜನೆ ಆರಂಭಿಸಲಾಗಿದ್ದು ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 2 ಎಕರೆ ಜಾಗ ಖರೀದಿಗೆ 5ರಿಂದ 6 ಕೋಟಿ ರು. ಅಂದಾಜು ಆಗುವ ನಿರೀಕ್ಷೆಯಿದ್ದು ಭೂ ದಾನ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿವಿಧ ವಿಭಾಗಗಳಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ, ಅನ್ನಸಂತರ್ಪಣೆ, ಸುರಕ್ಷತೆ, ಪ್ರಚಾರ ಸಮಿತಿ ಸೇರಿದಂತೆ 30 ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ದಿವಾಕರ ಸಾಮಾನಿ, ಸುನಿಲ್ ಆಳ್ವ, ಈಶ್ವರ ಕಟೀಲ್, ಡಾ. ಸೋಂದಾ ಭಾಸ್ಕರ್ ಭಟ್, ಸದಾಶಿವ ಶೆಟ್ಟಿ ಮುರ, ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಬೆಲ್ಚಡ ಆದಿ ಉಡುಪಿ ಉಪಸ್ಥಿತರಿದ್ದರು.

ವಾಮನ್ ಇಡ್ಯಾ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ವಂದಿಸಿದರು.