ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತದ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ತರ ಬದಲಾವಣೆ ತರಲು ಸಜ್ಜಾಗಿದೆ. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಸುಧಾರಣೆ ತರಲು ಕೃತಕ ಬುದ್ಧಿಮತ್ತೆಯನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ವ್ಯಾಪಕ ಸಂಶೋಧನೆಗಳೂ ನಡೆಯುತ್ತಿವೆ. ಇಂಥದ್ದೇ ಪ್ರಯತ್ನವೊಂದರ ವಿವರಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಹಂಚಿಕೊಂಡರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು, ಒಂದು ಕುಟುಂಬ, ವಿಶ್ವ ಸಾಂಸ್ಕೃತಿಕ ಮಹೋತ್ಸವ''''ದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿ, ಭಾರತದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಆರಂಭಿಸುವ ಸಂಕಲ್ಪ ಮಾಡಿದ್ದೇವೆ. ವಿದೇಶಗಳಲ್ಲಿಯೂ ಇಂಥ ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಒಟ್ಟು 100 ಕೋಟಿ ಜನರಿಗೆ ವೈದ್ಯಕೀಯ ಸೇವೆ ಒದಗಿಸುವಂತೆ ಆಗಬೇಕು ಎನ್ನುವ ಗುರಿಯಿದೆ ಎಂದು ವಿವರಿಸಿದರು.
ಲಾರ್ಜ್, ಲ್ಯಾಂಗ್ವೇಜ್, ಲರ್ನಿಂಗ್ ಮಾಡೆಲ್‌ಗಳ ಮೂಲಕ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಹೊಸ ವ್ಯವಸ್ಥೆ ರೂಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ತಜ್ಞ ವೈದ್ಯರನ್ನು ನಾವು ಗ್ರಾಮೀಣ ಪ್ರದೇಶಗಳಿಗೆ ಕರೆದೊಯ್ಯಲು ಸಾಧ್ಯವಿಲ್ಲ. ಸಾಯಿ ಸ್ವಾಸ್ಥ್ಯ ಕೇಂದ್ರಗಳಿಗೆ ಬರುವ ರೋಗಿಗಳು ತಮ್ಮದೇ ಭಾಷೆಯಲ್ಲಿ ವಿವರ ನೀಡಿದರೆ ದೂರದಲ್ಲಿರುವ ತಜ್ಞರಿಗೆ ಎಐ ಭಾಷೆಯಲ್ಲಿ ವಿವರಗಳನ್ನು ಭಾಷಾಂತರಿಸುತ್ತದೆ. ನಂತರ ತಜ್ಞರು ನೀಡುವ ಸಲಹೆಯನ್ನು ಸ್ಥಳೀಯ ಭಾಷೆಯಲ್ಲಿ ರೋಗಿಗಳಿಗೆ ತಿಳಿಸುತ್ತದೆ. ಸಾಯಿ ಸ್ವಾಸ್ಥ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿಯೂ ಸಹಕರಿಸಲಿದ್ದಾರೆ ಎಂದು ಹೇಳಿದರು.ಒಬ್ಬನೇ ರೋಗಿಯನ್ನು ವೈದ್ಯರು ಮತ್ತು ಎಐ ಮೂಲಕ ತಪಾಸಣೆಗೆ ಒಳಪಡಿಸಲಾಯಿತು. ಎಐ ಮಾಡಿದ ಶಿಫಾರಸು ವೈದ್ಯರು ಮಾಡಿದ ಶಿಫಾರಸಿಗೆ ಶೇ. 95ರಷ್ಟು ಹೋಲಿಕೆಯಾಗಿತ್ತು. ಎಲ್ಲ ವೈದ್ಯಕೀಯ ಶಿಷ್ಟಾಚಾರಗಳನ್ನು ಎಐ ಸಹ ಪಾಲಿಸಿತ್ತು. ರೋಗಿ ಮತ್ತು ವೈದ್ಯಕೀಯ ವ್ಯವಸ್ಥೆಯ ನಡುವೆ ಇರುವ ಹಲವು ಅಂತರಗಳನ್ನು ಕಡಿಮೆ ಮಾಡಲು ಮಾನವೀಯ ನೆಲೆಗಟ್ಟಿನ ತಂತ್ರಜ್ಞಾನವು ನೆರವಾಗಲಿದೆ ಎಂದು ಅಪರೂಪದ ವಿವರ ನೀಡಿದರು.
ಸಬ್ರೆ ಟ್ರಾವೆಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ಶ್ರೀರಾಮ್ ಗೋಪಾಲಸ್ವಾಮಿ, ವರ್ತ್ ಎಲೆಕ್ಟ್ರಾನಿಕ್ಸ್ ಸರ್ವೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ಮಮತಾ ಪ್ರಭು, ಪ್ರಾಣಿಕ್ ಎಐ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಗುಂಡುಮೊಗುಲ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ'''' ಸ್ವೀಕರಿಸಿದರು.ಥಾಯ್‌ಲೆಂಡ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಆನಂದ ದೇವಮಾಲಾ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ''''ಒಂದು ಜಗತ್ತು, ಒಂದು ಕುಟುಂಬ, ಮಾನವೀಯ ಪುರಸ್ಕಾರ'''' ನೀಡಿ ಗೌರವಿಸಿದರು. ಥಾಯ್‌ಲೆಂಡ್ ದೇಶದ ಪ್ರತಿನಿಧಿಗಳಾದ ಕತವುತ್ ಪೋರ್ನಿಮ್, ಲಿಯಾ ಬ್ಯಾನರ್ಜಿ ತಮ್ಮ ಅನಿಸಿಕೆ ಹಂಚಿಕೊಂಡರು. ಥಾಯ್‌ಲೆಂಡ್ ದೇಶದಿಂದ ಬಂದಿದ್ದ ಕಲಾವಿದರು ರಾಮಾಯಣ ದೃಶ್ಯರೂಪಕ ಪ್ರದರ್ಶಿಸಿದರು.