ಶಾಲೆಯ ಮಕ್ಕಳಿಗಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಉಳಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಲಿಂಗರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಶಾಲೆಯ ಮಕ್ಕಳಿಗಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಉಳಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಲಿಂಗರಾಜು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕರಡಿ ಗ್ರಾಮದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಗಾಗಿ ಶಾಲೆಯ ಕಟ್ಟಡದ ಭಾಗ ಸುಮಾರು ಒಂದು ಮೀಟರ್‌ನಷ್ಟು ಒಡೆದು ಹಾಕಲು ಗುರುತು ಮಾಡಲಾಗಿದ್ದು ಸರ್ಕಾರಿ ಶಾಲೆಯ ಉಳಿವಿಗಾಗಿ ಒಂದು ಮೀಟರ್ ಮಾತ್ರ ರಿಯಾಯಿತಿ ತೋರಿದರೆ ಶಾಲೆಯ ಕಟ್ಟಡ ಉಳಿಯುತ್ತದೆ. ಇದರಿಂದ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಈಗ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ೨೭ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲೆಯ ಕಟ್ಟಡ ಒಡೆಯಲು ಅನುವು ಮಾಡಿಕೊಟ್ಟು ಬೇರೆ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಆದರೆ ನಾಲ್ಕು ತರಗತಿಗಳನ್ನು ನಡೆಸಲು ಅಲ್ಲಿ ಸೌಲಭ್ಯವಿಲ್ಲ. ಇದೇ ಗ್ರಾಮದಲ್ಲಿ ಕೆಲವು ಕಟ್ಟಡ ಒಡೆಯುವಲ್ಲಿ ಅಳತೆ ರಿಯಾಯಿತಿ ನೀಡಿ ಕಟ್ಟಡ ಉಳಿಸಲಾಗಿದೆ. ಆದ್ದರಿಂದ ಈ ಕಟ್ಟಡವನ್ನೂ ಒಡೆಯದೆ ಶಾಲೆಗೆ ಉಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.ಈಗ ರಸ್ತೆ ವಿಸ್ತರಣೆಗಾಗಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸುಮಾರು ೧೨ಲಕ್ಷ ರುಗಳ ಪರಿಹಾರ ಬಂದಿದ್ದು ಅದನ್ನು ತಿಪಟೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ನೀಡಲಾಗುತ್ತಿದೆ. ಅದರ ಬದಲಿಗೆ ಇದೇ ಪರಿಹಾರದ ಹಣವನ್ನು ಶಾಲೆಯ ಎಸ್‌ಡಿಎಂಸಿ ಕಮಿಟಿಗೆ ನೀಡಿದರೆ, ಅದನ್ನು ಡಿಪಾಸಿಟ್ ಮಾಡಿ ಅದರಿಂದ ಬರುವ ಬಡ್ಡಿಯಿಂದ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಬಹುದು ಎಂದರು.ಇದೇ ವಿಚಾರವಾಗಿ ತಹಸೀಲ್ದಾರ್ ಹಾಗೂ ಇಲಾಖೆಗೆ ಓಡಾಡಿ ಹಲವಾರು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಪತ್ರಿಕೆ ಮೂಲಕ ನ್ಯಾಯ ಕೇಳಲು ಬಂದಿದ್ದು ಇದರಲ್ಲಿ ನನ್ನ ಸ್ವಂತ ಹಿತಾಸಕ್ತಿ ಯಾವುದೂ ಇಲ್ಲ. ಕೇವಲ ಸರ್ಕಾರಿ ಶಾಲೆಯ ಉಳಿವಿಗಾಗಿಯಷ್ಟೇ ನನ್ನ ಹೋರಾಟ ಎಂದು ಸ್ಪಷ್ಟಪಡಿಸಿದರು.