ಸಾರಾಂಶ
ಎಲ್ಲಾ ಜನವರ್ಗದವರು ನಮ್ಮ ಸೇವೆಯನ್ನು ಪಡೆಯುತ್ತಾರೆ. ಎಲ್ಲಾ ಪಕ್ಷದ ರಾಜಕಾರಣಿಗಳು ನಮ್ಮ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಪಕ್ಕದ ರಾಜ್ಯದಲ್ಲಿ ಸವಿತಾ ಸಮಾಜವನ್ನು ಪ್ರವರ್ಗ ೧ಎಗೆ ಸೇರಿಸಿದ್ದಾರೆ. ಜಾತಿ ನಿಂದನೆ ಕಾಯಿದೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಕಾನೂನು ತರಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ನಿಷೇಧಿತ ಪದ ಬಳಸಿ ಸವಿತಾ ಸಮಾಜವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಸವಿತಾ ಸಮಾಜ ಹಾಗೂ ಹಿಂದುಳಿದ ವರ್ಗಗಳ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಸಿ.ಟಿ. ರವಿ ಒಬ್ಬ ಜಾತಿ ನಿಂದಕ ಮತ್ತು ಜಾತಿವಾದಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್ ಮಾತನಾಡಿ, ಸ್ವಾಭಿಮಾನ, ಗೌರವ ಮತ್ತು ಶ್ರಮದಿಂದ ಬದುಕುತ್ತಿರುವ ಸವಿತಾ ಸಮಾಜವನ್ನು ಅವಮಾನಿಸಿರುವ ಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಯೋಗ್ಯರಲ್ಲ. ಎಲ್ಲಾ ಸಮುದಾಯಗಳೊಡನೆ ಸಾಂಸ್ಕೃತಿಕ ಸಂಬಂಧವನ್ನು ಹೊಂದಿ ಎಲ್ಲಾ ಶುಭ ಕಾರ್ಯಗಳಲ್ಲಿ ಮಂಗಳವಾದ್ಯದ ಮೂಲಕ ಸ್ವಾಗತಿಸುವ ನಮ್ಮ ಸಮಾಜವನ್ನು ಅವಮಾನಿಸಿಲು ಹೇಗೆ ಮನಸ್ಸು ಬಂತು ಎಂದು ಕಟುವಾಗಿ ಪ್ರಶ್ನಿಸಿದರು.ಸವಿತಾ ಸಮಾಜದ ಮುಖಂಡ ಎಂ.ಬಿ.ಶಿವಕುಮಾರ ಮಾತನಾಡಿ, ದಲಿತರ ನಂತರ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವ ಸವಿತಾ ಸಮಾಜದ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ನಿರಂತರ ಅಪಮಾನ ತಪ್ಪಿಸಲು ಜಾತಿ ನಿಂದನೆ ಕಾಯಿದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಸಾಂವಿಧಾನಿಕವಾಗಿ ಮೇಲ್ಮನೆಯಲ್ಲಿ ಇದ್ದುಕೊಂಡು ಸಿ.ಟಿ.ರವಿ ಸವಿತಾ ಸಮಾಜವನ್ನು ನಿಂದಿಸಿರುವುದು ದುರಂತ. ಹಿಂದೂ ನಾವೆಲ್ಲ ಒಂದು ಎನ್ನುವವರು ಅತೀ ಹಿಂದುಳಿದವರನ್ನು ಅಪಮಾನಿಸುವುದು ನ್ಯಾಯವೇ? ಬಿಜೆಪಿ ನಿಮಗೆ ಇದನ್ನೇ ಹೇಳಿಕೊಟ್ಟಿರುವುದೇ ಎಂದು ಖಾರವಾಗಿ ಪ್ರಶ್ನಿಸಿದರು.ಜಿಲ್ಲಾ ಸವಿತಾ ಸಮಾಜ ಸಂಘದ ಮಾಜಿ ಅಧ್ಯಕ್ಷ ಪ್ರತಾಪ್ ಮಾತನಾಡಿ, ಎಲ್ಲಾ ಜನವರ್ಗದವರು ನಮ್ಮ ಸೇವೆಯನ್ನು ಪಡೆಯುತ್ತಾರೆ. ಎಲ್ಲಾ ಪಕ್ಷದ ರಾಜಕಾರಣಿಗಳು ನಮ್ಮ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಪಕ್ಕದ ರಾಜ್ಯದಲ್ಲಿ ಸವಿತಾ ಸಮಾಜವನ್ನು ಪ್ರವರ್ಗ ೧ಎಗೆ ಸೇರಿಸಿದ್ದಾರೆ. ಜಾತಿ ನಿಂದನೆ ಕಾಯಿದೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಕಾನೂನು ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುರುಪ್ರಸಾದ್ ಕೆರಗೋಡು, ಕೆ.ಎಚ್. ನಾಗರಾಜು, ಎಂ. ಕೃಷ್ಣ, ಲಕ್ಷ್ಮಣ್ ಚೀರನಹಳ್ಳಿ, ಮೋಹನ್ ತಾಳಶಾಸನ, ಎನ್. ದೊಡ್ಡಯ್ಯ, ಜಿಲ್ಲಾ ಸಂಘದ ಅಧ್ಯಕ್ಷ ಜಯರಾಂ, ಮುಖಂಡರಾದ ವೈರಮುಡಿ, ಅರಕೆರೆ ರಮೇಶ್, ನಾಗರಾಜು, ಅನಿಲ್‌ಕುಮಾರ್ ಸೇರಿದಂತೆ ಹಲವರು ಇದ್ದರು.;Resize=(128,128))
;Resize=(128,128))
;Resize=(128,128))