ಸಾರಾಂಶ
ರೋಣ: ತಾಲೂಕಿನ ಅರಹುಣಸಿ ಗ್ರಾಮದ ಎಸ್‌ಸಿ ಕಾಲನಿ ( ಜನತಾ ಪ್ಲಾಟ್) ತೆರಳುವ ರಸ್ತೆಯು ನಮ್ಮ ಜಾಗಯಲ್ಲಿದೆ ಎಂದು ಖಾಸಗಿ ವ್ಯಕ್ತಿಯೊಬ್ಬರು ಅಡ್ಡಲಾಗಿ ಮುಳ್ಳಿನ ಬೇಲಿ ಜಡಿದು ಸಂಚಾರ್ ಬಂದ್ ಮಾಡಿದ್ದು, ಈ ಕುರಿತು ತಹಸೀಲ್ದಾರ್ ಮತ್ತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ, ಜಾಗ ಮಾಲೀಕರೊಂದಿಗೆ ವಿನಂತಿಸಿದರೂ ಸಮಸ್ಯೆ ಇತ್ಯರ್ಥವಾಗದಿದ್ದರಿಂದ ಕೆರಳಿದ ಎಸ್‌ಸಿ ಕಾಲನಿ ನಿವಾಸಿಗಳು ಬುಧವಾರ ಸಂಜೆ ಅರಹುಣಸಿ - ಹುಲ್ಲೂರ ಮುಖ್ಯ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳಿನ ಬೇಲಿ ಜಡಿದು ಸಂಚಾರ ಬಂದ್ ಮಾಡಿ ಪ್ರತಿಭಟನೆಗೆ ಕುಳಿತರು.
ಎಸ್‌ಸಿ ಕಾಲನಿ ( ಜನತಾ ಪ್ಲಾಟ್)ನಲ್ಲಿ 56 ಆಶ್ರಯ ಮನೆಗಳಿದ್ದು, ಇಲ್ಲಿನ ನಿವಾಸಿಗಳಿಗೆ ಇರುವ ಏಕೈಕ ಮಾರ್ಗಕ್ಕೆ (ರಸ್ತೆ) , ನಮ್ಮ ಮಾಲ್ಕಿ ಜಾಗದಲ್ಲಿದೆ ಎಂದು ಗ್ರಾಮದ ವ್ಯಕ್ತಿಯೊಬ್ಬರು ಮುಳ್ಳಿನ ಬೇಲಿ ಹಾಕಿ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಈ ವೇಳೆ ಕೆಲಕಾಲ ಕಾಲನಿ ನಿವಾಸಿಗಳು ಜಾಗದ ವ್ಯಕ್ತಿಯೊಂದಿಗೆ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.ಸುದ್ದಿ ತಿಳಿಯುತ್ತಿದ್ದಂತೆ ಸಾಯಂಕಾಲ 4 ಗಂಟೆ ವೇಳೆಗೆ ಚಿಕ್ಕಮಣ್ಣೂರ ಪಿಡಿಒ ರಶೀದ ಹುಣಸಿಮರದ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಸ್ಥಳಕ್ಕೆ ತೆರಳಿ, ಜಾಗದ ಮಾಲೀಕರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಸ್ಪಂದಿಸದ ಜಾಗದ ಮಾಲೀಕ ,ನನ್ನ ಜಾಗದಲ್ಲಿ ನಾನು ಮುಳ್ಳಿನ ಬೇಲಿ ಹಾಕಿದ್ದೇನೆ. ಈ ಕುರಿತು ನನ್ನ ಬಳಿ ದಾಖಲೆಗಳಿವೆ. ಇದಲ್ಲದೇ ನನ್ನ ಜಾಗದ ಹದ್ದುಬಸ್ತಿಗೆ ಮುಳ್ಳಿನ ಬೇಲಿ ನಿರ್ಮಿಸುವ ಕುರಿತು ತಹಸೀಲ್ದಾರ್‌ಗೆ ಮನವಿ ನೀಡಿದ್ದೇನೆ. ಗ್ರಾಪಂಗೆ ತಹಸೀಲ್ದಾರ್ ನಾಗರಾಜ ಕೆ. ಅವರೇ ಲಿಖಿತ ಆದೇಶ ನೀಡಿದ್ದಾರೆ ಎಂದು ಹೇಳಿದರು. ಅದರಿಂದ ಕೆರಳಿದ ಎಸ್‌ಸಿ ಕಾಲನಿ ನಿವಾಸಿಗಳು ತಹಸೀಲ್ದಾರ್ ನಾಗರಾಜ ಕೆ. ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅರಹುಣಸಿ-ಹುಲ್ಲೂರ ಮುಖ್ಯ ರಸ್ತೆಗೆ ಅಡ್ಡಲಾಗಿ ಕಲ್ಲು, ಮುಳ್ಳಿನ ಬೇಲಿ ಜಡಿದು ಪ್ರತಿಭಟನೆಗೆ ಕುಳಿತರು.ತಹಸೀಲ್ದಾರ್ ಬರುವಂತೆ ಪಟ್ಟು: ಎಸ್‌ಸಿ ಕಾಲನಿ ಸಮಸ್ಯೆ ಪರಿಹರಿಸುವಂತೆ ಅನೇಕ ವರ್ಷಗಳಿಂದ ವಿನಂತಿಸುತ್ತಿದ್ದರೂ ತಾಲೂಕ ಆಡಳಿತ ಮತ್ತು ಗ್ರಾಪಂ ಅಧಿಕಾರಿಗಳು ಗಮನ ಹರಿಸಿಲ್ಲ. ಇದರಿಂದಾಗಿಯೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಜಾಗದ ಮಾಲೀಕರು ಎಸ್‌ಸಿ ಕಾಲನಿ ರಸ್ತೆ ತಮ್ಮ ಜಾಗದಲ್ಲಿದೆ ಎಂದು ಹೇಳುವುದಾದರೆ ಪ್ಲಾಟ್‌ಗೆ ತೆರಳಲು ರಸ್ತೆ ಯಾವುದು ಎಂದು ತೋರಿಸಲಿ. ಎಲ್ಲಿಯಾದರೂ ರಸ್ತೆ ಇರಬೇಕಲ್ಲವೇ? ಕೂಡಲೇ ಪ್ಲಾಟ್‌ಗೆ ತೆರಳಲು ರಸ್ತೆ ಗುರುತಿಸಿ, ಇಲ್ಲವೇ ಪರ್ಯಾಯ ರಸ್ತೆ ಒದಗಿಸಿ ಅಥವಾ ಮುಳ್ಳಿನ ಬೇಲಿ ತೆರವುಗೊಳಿಸಿ, ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಈ ಕುರಿತು ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ ಕೆ. ಅವರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನೆ ನಿರತರು ಪಟ್ಟು ಹಿಡಿದರು.ತಹಸೀಲ್ದಾರ್ ಜಿಲ್ಲಾಕೇಂದ್ರಕ್ಕೆ ತೆರಳಿದ್ದರಿಂದ ಅವರು ಸಭೆ ಮುಗಿಸಿ ಬರಲು ರಾತ್ರಿ 8 ಗಂಟೆಯಾಗಬಹುದು ಎಂದು ಕಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ತಹಸೀಲ್ದಾರ್ ಬರುವ ವರೆಗೂ ರಸ್ತೆ ಬಿಟ್ಟು ಕದಲುವುದಿಲ್ಲ, ಅಹೋರಾತ್ರಿ ರಸ್ತೆ ಮೇಲೆ ಧರಣಿ ನಡೆಸುತ್ತೇವೆ ಎಂದು ಕಾಲನಿಯವರು ಪಟ್ಟು ಹಿಡಿದು ಕುಳಿತರು.ಪ್ರತಿಭಟನೆಯಲ್ಲಿ ಸೋಮು ಹಿಂದಿನಮನಿ, ಶರಣಪ್ಪ ದೊಡ್ಡಮನಿ, ಶೇಖಪ್ಪ ಚಲವಾದಿ, ರಂಗಪ್ಪ ನಡುವಿನಮನಿ, ದೇವಪ್ಪ ಚಲವಾದಿ, ಶರಣಪ್ಪ ಚಲವಾದಿ, ಯಲ್ಲಪ್ಪ ಚಲವಾದಿ, ರಂಗಪ್ಪ ಮಾದರ, ಪಡಿಯಪ್ಪ ಬಸರಕೋಡ, ರವೀಂದ್ರ ಕಿತ್ತೂರ, ಯಲ್ಲಪ್ಪ ಚಲವಾದಿ, ಮುತ್ತಪ್ಪ ದೊಡ್ಡಮನಿ, ವಿರೂಪಾಕ್ಷಪ್ಪ ಬೊಳುಟಗಿ, ಬಸಪ್ಪ ಮಾದರ, ಹನುಮಂತಪ್ಪ ಮಾದರ, ಮಹಾದೇವಪ್ಪ ಮಾದರ, ಮಂಜುನಾಥ ಚಲವಾದಿ, ಮನೋಹರ ಹಾದಿಮನಿ, ಚಂದ್ರು ಚಲವಾದಿ, ಹನುಮವ್ವ ಪೂಜಾರ, ಮಲ್ಲವ್ವ ಹಿಂದಿನಮನಿ, ರೋಣವ್ವ ಬಸರಕೋಡ, ಬಸವ್ವ ಚಲವಾದಿ, ಮುತ್ತಪ್ಪ ಚಲವಾದಿ ಇದ್ದರು.