ನಂಜನಗೂಡು 20ನೇ ವಾರ್ಡ್‌ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ

| Published : Dec 28 2023, 01:46 AM IST / Updated: Dec 28 2023, 01:47 AM IST

ನಂಜನಗೂಡು 20ನೇ ವಾರ್ಡ್‌ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಒಟ್ಟು 896 ಮತದಾರರ ಪೈಕಿ 568 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 275 ಪುರುಷರು ಹಾಗೂ 293 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ನಂಜನಗೂಡು ನಗರಸಭೆಯ 20ನೇ ವಾರ್ಡ್‌ಗೆ ಬುಧವಾರ ನಡೆದ ಉಪಚುನಾವಣೆ ಅಂಗವಾಗಿ ರಾಷ್ಟ್ರಪತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯಿತು.

ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಒಟ್ಟು 896 ಮತದಾರರ ಪೈಕಿ 568 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 275 ಪುರುಷರು ಹಾಗೂ 293 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಧ್ಯಾಹ್ನದವರೆವಿಗೂ ನಿಧಾನಗತಿಯಲ್ಲಿ ಸಾಗಿದ ಮತದಾನ ನಂತರ ಬಿರುಸುಗೊಂಡಿತು. ವಾರ್ಡಿನ ಹಿರಿಯ ನಾಗರಿಕರು, ಅಂಗವಿಕಲರು ಕೂಡ ಆಸಕ್ತಿಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ದೊರೆಸ್ವಾಮಿ, ಬಿಜೆಪಿ ಅಭ್ಯರ್ಥಿ ಪಿ. ಮಹೇಶ್ ಅತ್ತಿಖಾನೆ, ಜೆಡಿಎಸ್ ಅಭ್ಯರ್ಥಿ ಸುಬ್ರಹ್ಮಣ್ಯ, ಎಎಪಿ ಅಭ್ಯರ್ಥಿ ಜಯಲಕ್ಷ್ಮಿ ಸ್ಪರ್ಧೆಯ ಕಣದಲ್ಲಿದ್ದು, ಮತದಾನದ ವೇಳೆ ಅಂತಿಮ ಸುತ್ತಿನ ಕಸರತ್ತು ನಡೆಸಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಅಲ್ಲದೆ ಮೂರು ಪಕ್ಷದ ಪ್ರಮುಖ ನಾಯಕರು ಹಾಗೂ ಮುಖಂಡರು ಮತಗಟ್ಟೆ ಸಮೀಪದಲ್ಲಿ ಬೀಡುಬಿಟ್ಟು ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯುವ ಪ್ರಯತ್ನ ಮಾಡಿದರು. ಮತದಾನ ಮುಗಿಯುವರೆಗೂ ಮತಗಟ್ಟೆ ಆವರಣದಲ್ಲೇ ಇದ್ದು ಮತ ಬೇಟೆ ನಡೆಸಿದರು.

ಮತಪೆಟ್ಟಿಗೆಯನ್ನು ತಾಲೂಕು ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಿದ್ದು, ನಾಲ್ವರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಡಿ. 30ರ ಶನಿವಾರ ಮತ ಎಣಿಕೆ ಕಾರ್ಯವು ನಡೆಯಲಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯುವಳು ಕಾದು ನೋಡಬೇಕಿದೆ.