ಎಸ್ಸಿ, ಎಸ್ಟಿ ಮೀಸಲು: ಶೆಡ್ಯೂಲ್‌ 9 ಸೇರ್ಪಡೆಗೆ ಯತ್ನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

| Published : Feb 10 2024, 01:51 AM IST / Updated: Feb 10 2024, 03:59 PM IST

ಎಸ್ಸಿ, ಎಸ್ಟಿ ಮೀಸಲು: ಶೆಡ್ಯೂಲ್‌ 9 ಸೇರ್ಪಡೆಗೆ ಯತ್ನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೆ ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಲಿದ್ದು, ಮೋದಿ ಅಧಿಕಾರಾವಧಿಯಲ್ಲೇ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರ್ಪಡೆಗೆ ಒತ್ತಾಯಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ/ ಹರಿಹರ

ಮತ್ತೆ ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಲಿದ್ದು, ಮೋದಿ ಅಧಿಕಾರಾವಧಿಯಲ್ಲೇ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರ್ಪಡೆಗೆ ಒತ್ತಾಯಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಶುಕ್ರವಾರ 26ನೇ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿ, ನಾಯಕ ಸಮಾಜವನ್ನು ಎಸ್ಟಿಗೆ ಸೇರಿಸಲು ದೊಡ್ಡ ಮಟ್ಟದ ಹೋರಾಟ ನಡೆದಿದ್ದು, ಹಿಂದೆ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದ ವೇಳೆ ಶಿಫಾರಸ್ಸು ಮಾಡಿದ್ದರು. ಕೇಂದ್ರದಲ್ಲಿ ಚಂದ್ರಶೇಖರ್‌ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಮಾಜಿ ಪ್ರಧಾನಿ ದೇವೇಗೌಡರು ಎಸ್ಪಿಗೆ ಸೇರಿಸಲು ಶ್ರಮಿಸಿದ್ದರು ಎಂದರು.

ಎಸ್‌ಟಿಗೆ ಸೇರ್ಪಡೆಯಾದ ನಂತರ 35 ವರ್ಷದಲ್ಲಿ ನಾಯಕ ಸಮಾಜದ ಜನಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಸಮಾಜದ ಆಶೋತ್ತರಗಳೂ ಹೆಚ್ಚಾಗಿವೆ. ದೇಶದಲ್ಲಿ ಕಾಲ ಕಾಲಕ್ಕೆ ಆಗುವ ಸಾಮಾಜಿಕ ಬದಲಾವಣೆಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿಗೆ, ಸಮಾಜದ ಬೇಡಿಕೆಗೆ ಸ್ಪಂದಿಸುವ ಇಚ್ಛಾಶಕ್ತಿ ಬೇಕಾಗುತ್ತದೆ ಎಂದು ತಿಳಿಸಿದರು.

ಐತಿಹಾಸಿಕ ತೀರ್ಮಾನ ಕೈಗೊಂಡೆ: ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೋರಾಟ ಫಲವಾಗಿ ಎಸ್ಟಿ ಮೀಸಲಾತಿ ಪ್ರಮಾಣ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲು ನನಗೆ ಪ್ರೇರಣೆಯಾಯಿತು. ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸುತ್ತಿದ್ದಕ್ಕೆ ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಎಂಬುದಾಗಿ ಕೆಲವರು ಆಗ ಎಚ್ಚರಿಸಿದ್ದರು. ನನಗೆ ಜೇನುಗಳು ಕಚ್ಟಿದರೂ ಚಿಂತೆ ಇಲ್ಲ. 

ಈ ಸಮುದಾಯಗಳಿಗೆ ಜೇನು ತಿನ್ನಿಸುತ್ತೇನೆಂದು ಐತಿಹಾಸಿಕ ತೀರ್ಮಾನ ಕೈಗೊಂಡೆ. ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದರು.

ನಾಯಕ ಸಮಾಜಕ್ಕೆ ಮೀಸಲಾತಿ ಹೆಚ್ಚಳದಿಂದಾಗಿ ಸುಮಾರು 3500 ಇಂಜಿನಿಯರಿಂಗ್ ಸೀಟು, ಸುಮಾರು 400 ವೈದ್ಯಕೀಯ ಸೀಟು ಹೆಚ್ಚುವರಿಯಾಗಿ ಸಿಕ್ಕಿವೆ. ಎಲ್ಲಾ ಇಲಾಖೆಗಳ ಬಡ್ತಿಯಲ್ಲಿ ಅವಕಾಶಗಳೂ ಸಿಕ್ಕಿವೆ. 

ನಾವು ಮಾಡಿದ ಆದೇಶವನ್ನು ಈಗಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಬೇಕು. ವಾಲ್ಮೀಕಿ ಸ್ವಾಮೀಜಿಗಳೇ ಸರ್ಕಾರದ ಮೇಲೆ ಒತ್ತಡ ಹೇರಿ, ಈ ಕೆಲಸ ಮಾಡಿಸಬೇಕು ಎಂದು ಹೇಳಿದರು.

ಶ್ರೀಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಪಕ್ಷ ನಾಯಕ ಆರ್.ಅಶೋಕ, ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವ ರಾಜುಗೌಡ ಸೇರಿ ಹಾಲಿ-ಮಾಜಿ ಜನ ಪ್ರತಿನಿಧಿಗಳು, ಸಮಾಜದ ಮುಖಂಡರಿದ್ದರು.

ಸಮುದಾಯಗಳಿಗೆ ಅನುಕೂಲ: ಜನರ ಇಚ್ಛಾಶಕ್ತಿಯೇ ಪ್ರಜಾಪ್ರಭುತ್ವದಲ್ಲಿ ಅಂತಿಮ. ಜನರ ಇಚ್ಛಾಶಕ್ತಿಗೆ ಅನುಗುಣವಾಗಿ ಕೆಲಸ ಮಾಡಿದ ಹೆಮ್ಮೆ, ಸಂತೃಪ್ತಿ ನನಗಿದೆ. ಎಸ್ಸಿ, ಎಸ್ಟಿ, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಡಲು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದ್ದು, ನಾವು ಮಾಡಿದ ತೀರ್ಮಾನಗಳು ಮುಂದಿನ ದಿನಗಳಲ್ಲಿ ಆ ಸಮುದಾಯಗಳಿಗೆ ಅನುಕೂಲವಾಗಲಿವೆ ಎಂಬ ವಿಶ್ವಾಸವಿದೆ.ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ಕಟ್ಟಿಸಲು ಮನವಿ ಮಾಡುವೆ: ಬೊಮ್ಮಾಯಿ

123 ರಾಮಾಯಣ ಕೃತಿಗಳ ಪೈಕಿ ವಾಲ್ಮೀಕಿ ರಾಮಾಯಣವೇ ಶ್ರೇಷ್ಠ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದರೆ, ಅದರ ಆತ್ಮವೇ ಮಹರ್ಷಿ ವಾಲ್ಮೀಕಿ. ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ಕಟ್ಟಬೇಕೆನ್ನುವ ನಾಯಕ ಸಮಾಜದ ಬೇಡಿಕೆಯನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ರ ಸರ್ಕಾರದ ಗಮನಕ್ಕೆ ತಂದು, ಅಲ್ಲಿ ಭವ್ಯ ವಾಲ್ಮೀಕಿ ಮಂದಿರ ನಿರ್ಮಿಸಲು ಮನವಿ ಮಾಡಲಾಗುವುದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಒಬ್ಬ ನಾಯಕನಾಗಿ ಜನರಿಗೆ ರಕ್ಷಣೆ ಕೊಡದಿದ್ದರೆ ಏನು ಪ್ರಯೋಜನ? ನಾವು ಯಾವುದೇ ಸಮುದಾಯದಲ್ಲಿ ಹುಟ್ಟಿರಬಹುದು. ಆದರೆ, ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ಅವಕಾಶ ಸಿಕ್ಕಾಗ ಆ ಕೆಲಸ ಮಾಡಬೇಕು ಎಂದರು. ಮಹರ್ಷಿ ವಾಲ್ಮೀಕಿಯೆಂದರೆ ಚೈತನ್ಯ, ಶಕ್ತಿ, ಪರಿವರ್ತನೆಯ ಹರಿಕಾರರು. 

ಗಾಳಿ, ನೀರು, ಪ್ರಕೃತಿ ನಿರಂತರ ಪರಿವರ್ತನೆಯಾಗುತ್ತವೆ. ಪರಿವರ್ತನೆಗೆ ಅತ್ಯಂತ ಶ್ರೇಷ್ಟ ನಿದರ್ಶನ ವಾಲ್ಮೀಕಿಯವರು. ಮಹರ್ಷಿ ವಾಲ್ಮೀಕಿ ಇಲ್ಲದೇ ರಾಮಾಣಯವಿಲ್ಲ. ರಾಮಾಯಣ ಇಲ್ಲದೇ, ರಾಮನೂ ಇಲ್ಲ. ದೇಶದಲ್ಲಿ 123 ರಾಮಾಯಣ ಕೃತಿಗಳಿವೆ. ಅವುಗಳಲ್ಲಿ ಶ್ರೇಷ್ಠ ಕೃತಿಯೆಂದರೆ ಅದು ವಾಲ್ಮೀಕಿ ರಾಮಾಯಣ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.