ಕೊಡವಲ್ಯಾಂಡ್‌ ಭೂ-ರಾಜಕೀಯ ಸ್ವಾಯತ್ತತೆ ಆಗ್ರಹಿಸಿ ಸಿಎನ್‌ಸಿ ಧರಣಿ

| Published : Feb 10 2024, 01:51 AM IST

ಸಾರಾಂಶ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕೊಡವ ಲ್ಯಾಂಡ್ ಮತ್ತು ಕೊಡವ ಪ್ರಾತಿನಿಧ್ಯದ ಪರ ಪ್ರಮುಖರು ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕೊಡವ ಲ್ಯಾಂಡ್ ಮತ್ತು ಕೊಡವ ಪ್ರಾತಿನಿಧ್ಯದ ಪರ ಪ್ರಮುಖರು ಘೋಷಣೆಗಳನ್ನು ಕೂಗಿದರು.

ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ ಅನುಚ್ಛೇದ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ‘ಸಂಘ’ ಮತ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಎನ್.ಯು.ನಾಚಪ್ಪ ಮಾತನಾಡಿ, ಕೊಡವ ಲ್ಯಾಂಡ್ ಸ್ವಯಂ ಆಡಳಿತ ಮತ್ತು ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯದ ಕುರಿತು ರಾಷ್ಟ್ರಪತಿಗಳು ಸುಗ್ರಿವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿದರು.

ಅಧ್ಯಕ್ಷೀಯ ಸುಗ್ರೀವಾಜ್ಞೆ ಪ್ರಕಟಿಸಿ - ಆರ್ಟಿಕಲ್ 32 ರ ಅಡಿಯಲ್ಲಿ ಸಾಂವಿಧಾನಿಕ ಪರಿಹಾರವಾಗಿ ಸಾಂವಿಧಾನಿಕ ಕಾರ್ಯವಿಧಾನ ರಂಭಿಸಬೇಕೆಂದು ಆಗ್ರಹಿಸಿದರು. ಕೊಡವ ಲ್ಯಾಂಡ್ ಸ್ವಯಂ ಆಡಳಿತ ಹಕ್ಕೊತ್ತಾಯವು ನಮ್ಮ ಸಂವಿಧಾನ ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಚಾರ್ಟರ್‌ನಲ್ಲಿ ಪ್ರಸ್ತಾಪಿಸಲ್ಪಟ್ಟ ವಿಧಿಗಳ ಪ್ರಕಾರ ಸೂಕ್ಷ್ಮ ನಗಣ್ಯ ಸಮುದಾಯಗಳ ಸರ್ವಾಂಗೀಣ ವಿಕಾಸಕ್ಕಾಗಿ ಅಂತರ್ಗತವಾಗಿರುವ ಅನುವಂಶಿಕ, ಮೂಲಭೂತ, ಜನ್ಮಸಿದ್ದ ಹಕ್ಕುಗಳನ್ನು ಕಾಯ್ದುಕೊಳ್ಳುವ ಮೂಲಕ ಸ್ವಯಂ ನಿರ್ಣಯದ ಹಕ್ಕನ್ನು ಎತ್ತಿಹಿಡಿಯಲು ನಿರೂಪಿಸಿರುವ ಘೋಷಣೆಯಾಗಿದೆ ಎಂದರು.

ಈಗ ಕೇವಲ 842 ಕೊಡವ ಕುಲಗಳಿವೆ. ಕೊಡವಲ್ಯಾಂಡ್ ಎಕೆಎ ಕೂರ್ಗ್‌ನಲ್ಲಿ ಸುಮಾರು 80,000 ಕೊಡವರು ವಾಸಿಸುತ್ತಿದ್ದಾರೆ. ಸುಮಾರು 70,000 ಕೊಡವರು ಕೊಡಗಿನಿಂದ ಹೊರಗೆ ಬದುಕು ಕಟ್ಟಿಕೊಂಡಿದ್ದಾರೆ. ಕೊಡವರು ಅತೀ ನಗಣ್ಯ ಸೂಕ್ಷ್ಮಾತಿ ಸೂಕ್ಷ್ಮ ಗುಂಪಾಗಿದ್ದು, ವಿನಾಶದಿಂದ ಶಾಸನಬದ್ಧ ರಕ್ಷಣೆಯ ಮೂಲಕ ನಮ್ಮ ಕೊಡವ ಸಮುದಾಯವನ್ನು ರಕ್ಷಿಸಬೇಕಾಗಿದೆ. ನಮ್ಮನ್ನು ಸಂರಕ್ಷಿಸಲು ನಾವು ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಸ್ವ-ಆಡಳಿತ ಬಯಸುತ್ತೇವೆ. ಗೂರ್ಖಾಲ್ಯಾಂಡ್, ಲಡಾಖ್ ಮತ್ತು ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲೆ ಸಂವಿಧಾನದ ಅಡಿಯಲ್ಲಿ ಈ ಹಕ್ಕೊತ್ತಯವನ್ನು ಪ್ರತಿಪಾದಿಸುತ್ತಿದ್ದೇವೆ ಎಂದರು.

ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಅಪ್ಪನೆರವಂಡ ಶಾಂತಿ ಅಚಪ್ಪ ಸರ್ವ ಜಮ್ಮಡ ಮೋಹನ್, ಪಟ್ಟಮಾಡ ಕುಶಾಲಪ್ಪ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ಕಿರಿಯಮಡ ಶರೀನ್, ಚಂಬಂಡ ಜನತ್, ಮಂದಪಂಡ ಮನೋಜ್, ನಂದಿನೆರವಂಡ ವಿಜು, ಬೇಪಡಿಯಂಡ ದಿನು ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ, ಭಾರತದ ಚುನಾವಣಾ ಆಯೋಗ, ವಿಶ್ವ ವಿಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಿಶ್ವ ರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟರಸ್ ಅವರಿಗೆ ಎನ್.ಯು.ನಾಚಪ್ಪ ಅವರು ಮನವಿ ಪತ್ರ ಸಲ್ಲಿಸಿದರು.