ಕುಷ್ಟಗಿಯ ನೆರೆಬೆಂಚಿ ಗ್ರಾಮಸ್ಥರಲ್ಲಿ ಆತಂಕ ಬೇಡ: ಡಿಎಚ್‌ಒ ಲಿಂಗರಾಜು

| Published : Feb 10 2024, 01:51 AM IST

ಸಾರಾಂಶ

ಕಳೆದ 8 ರಿಂದ 10 ದಿನಗಳಿಂದ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ನೆರೆಬೆಂಚಿ ಗ್ರಾಮದಲ್ಲಿ ಹಿರೇಮನ್ನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿ, ಜ್ವರ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಕೊಪ್ಪಳ: ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ಕಂಡುಬಂದ ಜ್ವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಟಿ.ಲಿಂಗರಾಜು ತಿಳಿಸಿದ್ದಾರೆ.

ನೆರೆ ಬೆಂಚಿ ಗ್ರಾಮಕ್ಕೆ ಭೇಟಿ ನೀಡಿ, ವೈದ್ಯರೊಂದಿಗೆ ಚರ್ಚೆ ಮಾಡಿದ ಬಳಿಕ ಮಾಹಿತಿ ನೀಡಿದ್ದಾರೆ.

ಕಳೆದ 8 ರಿಂದ 10 ದಿನಗಳಿಂದ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ನೆರೆಬೆಂಚಿ ಗ್ರಾಮದಲ್ಲಿ ಹಿರೇಮನ್ನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿ, ಜ್ವರ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಜನರಿಗೆ ಸುಲಭವಾಗಿ ಬರಲು ಅನುಕೂಲವಾಗುವಂತೆ ಊರಿನ ಮಧ್ಯದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಿ, ಜನರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೆಚ್ಚಿನ ತೀವ್ರತರವಾದ ಲಕ್ಷಣಗಳು ಕಂಡುಬAದಿರುವ ಪ್ರಕರಣಗಳನ್ನು ಹತ್ತಿರದ ಕುಷ್ಟಗಿ ತಾಲ್ಲೂಕು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾರ್ವಾ ಸಮೀಕ್ಷೆ:

ಗ್ರಾಮದಲ್ಲಿರು ಒಟ್ಟು 256 ಮನೆಗಳಿಗೆ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದ್ದು, ಜನವರಿ 15ರಂದು 56 ಮನೆಗಳಲ್ಲಿ ಲಾರ್ವಾ ಕಂಡು ಬಂದಿದೆ. ಅದೇ ರೀತಿ ಜ.23ಕ್ಕೆ 25 ಮನೆಗಳಲ್ಲಿ, ಜ.29ರಂದು 20 ಮನೆಗಳಲ್ಲಿ ಹಾಗೂ ಫೆಬ್ರವರಿ 8ರಂದು ಕೈಗೊಂಡ ಸಮೀಕ್ಷೆಯಲ್ಲಿ 16 ಮನೆಗಳಲ್ಲಿ ಲಾರ್ವಾ ಕಂಡುಬಂದಿದೆ.

ಡೆಂಗ್ಯೂ, ಚಿಕೂನ್ ಗುನ್ಯ ಪರೀಕ್ಷೆ:

ಸಂಶಯಾತ್ಮಕ ಡೆಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳ ಸೀರಮ್ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಯನ್ನು ಜ.27ರಂದು ಮಾಡಲಾಗಿತ್ತು. ಅದರಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದರೆ, ಫೆ.6ರಂದು ಕೈಗೊಂಡ ಸೀರಮ್ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಯಲ್ಲಿ ಒಂದು ಚಿಕೂನ್ ಗುನ್ಯ ಪ್ರಕರಣವು ಕಂಡುಬಂದಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಗ್ರಾಮದ ಎಲ್ಲ 256 ಮನೆಗಳಲ್ಲಿ ಜ.25 ಮತ್ತು ಫೆ.5ರಂದು ಸೊಳ್ಳೆಗಳ ನಾಶಕ್ಕಾಗಿ ಒಳಾಂಗಣ ಧೂಮೀಕರಣ ಮಾಡಲಾಗಿದೆ.

ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ:

ನೆರೆಬೆಂಚಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರದ ಬೋರ್‌ವೆಲ್ ಹಾಗೂ ಜೆಜೆಎಂ ಮತ್ತು ಪ್ರಾಥಮಿಕ ಶಾಲೆಯ ಹತ್ತಿರದ ಫಿಲ್ಟರ್ ವಾಟರ್ ಘಟಕ ಸೇರಿ ಈ ಮೂರು ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಯನ್ನು ಜ.24ರಂದು ಕೈಗೊಳ್ಳಲಾಗಿದೆ. ಇವುಗಳಲ್ಲಿ ಪ್ರಾಥಮಿಕ ಶಾಲೆಯ ಹತ್ತಿರದ ಫಿಲ್ಟರ್ ವಾಟರ್ ಘಟಕದ ನೀರು ಮಾತ್ರ ಕುಡಿಯಲು ಯೋಗ್ಯವಿದೆ ಎಂದು ವರದಿ ನೀಡಲಾಗಿದೆ.

ನೆರಬೆಂಚಿ ಗ್ರಾಮದಲ್ಲಿ ಪ್ರತಿದಿನ ಜ್ವರ ಸಮೀಕ್ಷೆ ಹಾಗೂ ಲಾರ್ವಾ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಕಾರ್ಯ ಜಾರಿಯಲ್ಲಿರುತ್ತದೆ. ಜ್ವರ ಪ್ರಕರಣಗಳಿಗೆ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಜ್ವರ ಪ್ರಕರಣಗಳು ತಹಬದಿಗೆ ಬರುವವರೆಗೂ ಎಲ್ಲಾ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಚಿಕೂನ್ ಗುನ್ಯಾ ಇದೊಂದು ವೈರಸ್ ಕಾಯಿಲೆಯಾಗಿದ್ದು ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿರುತ್ತದೆ. ಇದರಿಂದ ಯಾವುದೇ ಸಾವು ಸಂಭವಿಸುವ ಸಾದ್ಯತೆ ಇರುವುದಿಲ್ಲ. ಇದಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲದಿದ್ದರೂ ಸಹ ಲಕ್ಷಣಗಳನ್ನು ಆಧರಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ರೋಗದ ನಿಯಯಂತ್ರಣಕ್ಕಾಗಿ ಸಾರ್ವಜನಿಕರು ಸೊಳ್ಳೆಗಳ ಕಡಿತದಿಂದ ಪಾರಾಗಲು ಸೂಕ್ತ ಸ್ವಯಂ ರಕ್ಷಣಾ ವಿಧಾನಗಳನ್ನು ಬಳಸಬೇಕು. ಮನೆಯ ಒಳಗಡೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸುವುದು, ವಾರಕ್ಕೊಮ್ಮೆಯಂತೆ ನೀರಿನ ಶೇಖರಣೆ ಸಲಕರಣೆಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿ, ಪುನಃ ನೀರು ತುಂಬಿ ಭದ್ರವಾಗಿ ಮುಚ್ಚಿಡಬೇಕು. ಜ್ವರ ಕಾಣಿಸಿಕೊಂಡರೇ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದ್ದಾರೆ.