ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯ ಕೊಟ್ಟ ಕನಕದಾಸರು

| N/A | Published : Nov 08 2025, 09:49 AM IST

Kanaka

ಸಾರಾಂಶ

15-16ನೇ ಶತಮಾನದ ಸಂತ ಕವಿ ಕನಕದಾಸರು, ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ, ತಮ್ಮ ಭಕ್ತಿ ಜ್ಞಾನದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠರಾಗಿದ್ದಾರೆ.

ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದರೂ ಕಾವ್ಯರಚನೆಯಿಂದ ‘ದಾಸವರೇಣ್ಯ’ ಗೌರವಕ್ಕೆ ಪಾತ್ರರಾದ ದಾಸ ಶ್ರೇಷ್ಠರು ಕನಕದಾಸರು ಕೀರ್ತನೆಗಳಲ್ಲಿ ಸಂದೇಶ ನೇರ ಮತ್ತು ಮೌಖಿಕವಾಗಿವೆ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ಅದೇ ರೀತಿ ‘ಕುಲಕುಲಕುಲವೆಂದು ಹೊಡೆದಾಡದಿರಿ’ ಎಂದು ಜನಕ್ಕೆ ಎಚ್ಚರಿಸುತ್ತಾರೆ 

ಸಂಗಮೇಶ ಎನ್.ಜವಾದಿ, ಬರಹಗಾರರು, ಚಿಂತಕರು, ಹೋರಾಟಗಾರರು. ಬೀದರ ಜಿಲ್ಲೆ.  

ನಮ್ಮ ಕರುನಾಡಿನ ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಬಸವಾದಿ ಶರಣರು, ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು. ಇವರಲ್ಲಿ ಎದ್ದು ಕಾಣುವವರು ಕನಕದಾಸರು. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರು ಎಂದು ಕರೆಯಿಸಿಕೊಂಡವರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪತ್ರರಾಗಿ ಲೋಕ ಕಲ್ಯಾಣಕ್ಕಾಗಿ ದುಡಿದವರು.

ಭಕ್ತಿ ಪಂಥದ ಪ್ರಮುಖರು ಅಂತೆಯೇ ಭಕ್ತ ಕನಕದಾಸರು ಕರ್ನಾಟಕದಲ್ಲಿ 15-16ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಪ್ರಮುಖರಾಗಿದ್ದವರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಹೌದು, ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಯ ಮಗನಾಗಿ 1509ರಲ್ಲಿ ಜನಿಸಿದರು. ತಂದೆ, ತಾಯಿ ಪ್ರೀತಿಯ ಮಗನಾಗಿದರು. ಬಾಲ್ಯದ ಜೀವನ ಆನಂದದಿಂದ ಸಾಗಿಸಿ, ಬೆಳೆದು ದೊಡ್ಡವರಾದರು. ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಸತ್ಯದ ಹಾದಿಯಲ್ಲಿ ನಡೆಯುವಂತ ಪ್ರಯತ್ನ ಮಾಡಿರುತ್ತಾರೆ. ಆ ಒಂದು ಸಮಯದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿ, ಜಾತ್ಯತೀತತೆಯ ಭಾವನೆ ಸರ್ವರಲ್ಲಿಯೂ ಮೂಡಿಸಲು ಪ್ರಯತ್ನಿಸಿದರು ಕನಕದಾಸರು ಎಂಬುದು ಕಾಣುತ್ತೇವೆ. ಕನಕದಾಸರ ಕೀರ್ತನೆಗಳುಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಸೃಷ್ಟಿಕರ್ತನನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. ‘ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ’ ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. 

 ಒಳಗಣ್ಣಿನಿಂದ ಅವನ ಕಂಡು- ‘ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ’ ಎಂದು ಸಂತೋಷಪಟ್ಟಿದ್ದಾರೆ. ‘ಎಲ್ಲಿ ನೋಡಿದರಲ್ಲಿ ಸೃಷ್ಟಿಕರ್ತ’ ಎಂಬ ಅನುಭೂತಿಯಲ್ಲಿ ಸೃಷ್ಟಿಕರ್ತನನ್ನು ಕಂಡ ಬಳಿಕ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಎಂಬ ಧನ್ಯತಾಭಾವ. ‘ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ’ ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ ‘ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ’ ಎನ್ನುತ್ತಾರೆ ಕನಕದಾಸರು. ಇನ್ನು ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಮೌಖಿಕವಾಗಿವೆ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ಅದೇ ರೀತಿ ‘ಕುಲಕುಲಕುಲವೆಂದು ಹೊಡೆದಾಡದಿರಿ’ ಎಂದು ಜನಕ್ಕೆ ಎಚ್ಚರಿಸುತ್ತಾರೆ. ಸಾಮಾಜಿಕ ಕಳಕಳಿಯ ಸಾಹಿತ್ಯ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಮೌಲ್ಯಾಧಾರಿತ ಸಾಹಿತ್ಯ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ.

 ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಹೀಗಿವೆ - ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕೃತಿಗಳು ನಾಡಿಗೆ ನೀಡಿದ್ದಾರೆ. ಹೀಗೆ ಕನಕರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ಚಟುವಟಿಕೆಗಳು ಮತ್ತು ಅಧ್ಯಯನಗಳು ಜನಪರ ಚಿಂತನೆಗಳಿಗೆ ಬೆಳಕಾಗಿವೆ. ಅವರು ಅನುಭವಿಸಿದ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ ಕನಕದಾಸರ ಕೀರ್ತನೆಗಳು ಜಾತಿ ಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ.

ಆಳವಾದ ವಿಷಾದವೂ ಇದೆ

 ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ. ಅದೇ ರೀತಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ’ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಹಾಗೆಯೇ ‘ನಳಚರಿತೆ’ ಮುಖ್ಯವಾಗಿ ಮನುಷ್ಯ ಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.‘ಮೋಹನತರಂಗಿಣಿ’ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯವಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ.

ಇನ್ನು ‘ರಾಮಧಾನ್ಯಚರಿತ್ರೆ’ಯು ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಬಹಳ ಶ್ರೇಷ್ಠ ಕಾವ್ಯ. ಜಾತಿ ಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆಯಾಗಿದೆ. ಅಂತೆಯೇ ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವುಗಳಲ್ಲದೆ ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಕಷ್ಟಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ನಾಡಿಗೆ ತೋರಿಸಿದ್ದಾರೆ. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಕಾಣಬಹುದಾಗಿದೆ. ಅಂದಹಾಗೆ ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು. ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು ಎನ್ನುವುದು ನಾವ್ಯಾರೂ ಮರೆಯಬಾರದು.  

 ಕನಕದಾಸರ ಸಾಮಾಜಿಕ ಮೌಲ್ಯ:

ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ. ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ ಎಂದಿದ್ದಾರೆ. ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ. ಕನಕದಾಸರು ಸಮಾಜದ ಒಳಿತಿಗೆ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. ಸಮಾಜದಲ್ಲಿ ಸತ್ಯ, ಧರ್ಮಗಳು ಮಾಯವಾಗುತ್ತಿರುವುದನ್ನು ನೋಡಿ ಮರುಕ ಪಟ್ಟಿದ್ದಾರೆ. ಹೀಗೆ ತೊಂಬತ್ತು ವರ್ಷಗಳ ಕಾಲ ಸುದೀರ್ಘ ಸಾರ್ಥಕ ಜೀವನ ನಡೆಸಿದವರು ಕನಕದಾಸರು. ಅವರು ರಚಿಸಿದ ಕೀರ್ತನೆಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ್ಯ ರತ್ನಗಳಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ.

Read more Articles on