ಕೀರ್ತನೆಗಳ ಮೂಲಕ ಜೀವನದ ಮೌಲ್ಯ ತಿಳಿಸಿದ ಕನಕದಾಸರು

| Published : Dec 04 2024, 12:31 AM IST

ಸಾರಾಂಶ

ಹೊಸದುರ್ಗ: ನಾನೂ ಎಂಬ ಮಮಕಾರ ಹೋದಾಗ ಸಾಧಕ ಸಾಧನೆ ಮಾಡಲು ಸಾಧ್ಯ. ನಾನು, ನನ್ನದು ಎಂಬ ಹಂಬಲ ಸುಮ್ಮನೆ ಅಳಿಯುವುದಿಲ್ಲ. ಪರಮಾತ್ಮನ ದಯೆ ಇರಬೇಕು. ಹೀಗೆ ದಾಸರು ತಮ್ಮ ಕೀರ್ತನೆಗಳ ಮೂಲಕ ಸರಳ ಭಾಷೆಯಲ್ಲಿ ವಿಷಯವನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಎಂದು ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು.

ಹೊಸದುರ್ಗ: ನಾನೂ ಎಂಬ ಮಮಕಾರ ಹೋದಾಗ ಸಾಧಕ ಸಾಧನೆ ಮಾಡಲು ಸಾಧ್ಯ. ನಾನು, ನನ್ನದು ಎಂಬ ಹಂಬಲ ಸುಮ್ಮನೆ ಅಳಿಯುವುದಿಲ್ಲ. ಪರಮಾತ್ಮನ ದಯೆ ಇರಬೇಕು. ಹೀಗೆ ದಾಸರು ತಮ್ಮ ಕೀರ್ತನೆಗಳ ಮೂಲಕ ಸರಳ ಭಾಷೆಯಲ್ಲಿ ವಿಷಯವನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಎಂದು ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು.

ಗೊರವಿನಕಲ್ಲು ಕನಕ ಯುವಕ ಸಂಘದಿಂದ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹುಟ್ಟು ಸಾವಿನ ಮಧ್ಯೆ ಬದುಕು ಸಾರ್ಥಕಗೊಳ್ಳಬೇಕು ಎಂದು ತಮ್ಮ ಕೀರ್ತನೆಗಳ ಮುಖಾಂತರ ಕನಕದಾಸರು ಜಗತ್ತಿಗೆ ಸಂದೇಶ ನೀಡಿದ್ದಾರೆ ಎಂದರು.

ಹಳೆಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಮಧ್ಯೆ ಐದು ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ಸಂತಕವಿ ಕನಕದಾಸರು ಮಾನವನ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.

ಕನಕ ಪುರಂದರರನ್ನು ಕನ್ನಡ ಕೀರ್ತನೆ, ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ದಿನನಿತ್ಯ ಕಾಯಕ ಮಾಡಿ ಬದುಕುವ ಹಾಲುಮತ ಸಮುದಾಯದವರು ಶ್ರಮಜೀವಿಗಳು. ಹಾಲುಮತ ಸಮುದಾಯದ ಜನರಲ್ಲಿ ಬಸವ, ಬುದ್ಧ, ಅಂಬೇಡ್ಕರ್ ಸಿದ್ಧಾಂತವನ್ನು ಅನುಸರಿಸಿ ಇತರೆ ಎಲ್ಲಾ ಸಮುದಾಯವನ್ನು ಸಮಾನತೆಯಿಂದ ಕಾಣುವ ಸಂಸ್ಕಾರವಂತರು ಇದ್ದಾರೆ ಎಂದರು.ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ.ಕೆ ಅನಂತ್ ಮಾತನಾಡಿ, ಕನಕದಾಸರ ಜೋಳಿಗೆಯಲ್ಲಿ ಭಕ್ತಿಯ ಸಿಂಚನವಿದೆ. ನಮ್ಮನು ಕಾಯುವನೊಬ್ಬನಿದ್ದಾನೆ. ಜಗದ ಜಂಜಾಟದಲ್ಲಿ ಸ್ವಾರ್ಥ ಲಾಲಸೆಗಳಲ್ಲಿ ತುಂಬಿದೆ. ನಿಸ್ವಾರ್ಥದಿಂದ ಬದುಕಿದಾಗ ಜೀವನ ಪಾವನವಾಗುತ್ತದೆ. ಸಾಂತ್ವನದ ನುಡಿ ಸಾಲದು, ಅದರೊಂದಿಗೆ ಆಧ್ಯಾತ್ಮದ ಆಪ್ತತೆಯ ಸವಿ ಬೆರೆಸಬೇಕೆಂದು ಕನಕದಾಸರು ತಿಳಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾದೇಶಿಕ ಕುರುಬರ ಸಂಘದ ಉಪಾಧ್ಯಕ್ಷ ಎಂ.ಎಚ್.ಕೃಷ್ಣಮೂರ್ತಿ, ಭಾರತ್ ಸೇವಾದಳದ ಅಧ್ಯಕ್ಷ ಎಂ.ಆರ್.ಸಿ.ಮೂರ್ತಿ, ಸಮಾಜ ಸೇವಕ ಆಗ್ರೋ ಶಿವಣ್ಣ ಮಾತನಾಡಿದರು.

ಕಾರೇಹಳ್ಳಿ ರೇವಣಸಿದ್ದೇಶ್ವರ ಮಠದ ಶೇಖರಯ್ಯ ಒಡೆಯರ್, ಕನಕ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಗ್ರಾ,ಪಂ ಉಪಾಧ್ಯಕ್ಷ ರಘು ಗೌಡ, ಹನುಮಂತಪ್ಪ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯವರು ಕನಕದಾಸರ ಕೀರ್ತನೆಗಳನ್ನು ಹಾಡಿದರು.