ಕೊಪ್ಪಳವಷ್ಟೇ ಅಲ್ಲ, ರಾಜ್ಯಾದ್ಯಂತ ಜಾಲದ ಶಂಕೆ
10 ಕ್ವಿಂಟಲ್ ಔಷಧಿ ವಿಲೇವಾರಿ; ಪ್ರಕ್ರಿಯೆ ಬಗ್ಗೆ ಅನುಮಾನಉಗ್ರಾಣದಲ್ಲಿ ಇನ್ನೂ 2–3 ಟನ್ ಔಷಧಿ ಇರುವ ಆರೋಪ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳಅವಧಿ ಮೀರಿದೆ ಎಂಬ ಕಾರಣಕ್ಕೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 10 ಕ್ವಿಂಟಲ್ ಔಷಧಿಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಲೇವಾರಿ ಮಾಡಿರುವ ಔಷಧಿಗಳು ಅಸಲಿಯೋ, ನಕಲಿಯೋ ಎಂಬ ಪ್ರಶ್ನೆ ಮೂಡಿದ್ದು, ಸಮಗ್ರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.
ರಾಜ್ಯಾದ್ಯಂತ ನಡೆದಿರುವ ನಕಲಿ ಔಷಧಿ ದಂಧೆಗೂ ಕೊಪ್ಪಳದಲ್ಲಿ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಅವಧಿ ಮೀರಿದ ನೆಪದಲ್ಲಿ ವಿಲೇವಾರಿ ಮಾಡಿರುವುದಕ್ಕೂ ಸಂಬಂಧವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ನಕಲಿ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ, ಬಳಿಕ ಅವುಗಳನ್ನು ಬಳಕೆಗೆ ಬಾರದ ಔಷಧಿಗಳೆಂದು ವಿಲೇವಾರಿ ಮಾಡುವ ದಂಧೆ ಕಳೆದ ನಾಲ್ಕೈದು ವರ್ಷಗಳಿಂದ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ನಿಯಮ ಗಾಳಿಗೆ?
ಸಾಮಾನ್ಯವಾಗಿ ಕಿಮ್ಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಲ್ಲಿಸುವ ಬೇಡಿಕೆ ಹಾಗೂ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಔಷಧಿಗಳನ್ನು ಖರೀದಿಸಬೇಕು. ಔಷಧಿಗಳ ದಾಸ್ತಾನು ಮತ್ತು ಬಳಕೆಯ ಮೇಲೂ ನಿಗಾ ವಹಿಸಬೇಕು. ಆದರೆ, ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಬೇಡಿಕೆಯನ್ನು ಆಧರಿಸದೆ ಔಷಧಿಗಳನ್ನು ಖರೀದಿಸಿರುವುದರಿಂದಲೇ ಟನ್ಗಟ್ಟಲೆ ಔಷಧಿಗಳು ಅವಧಿ ಮೀರಿವೆ ಎಂಬ ಆರೋಪ ಕೇಳಿಬಂದಿದೆ.ಔಷಧಿಗಳ ಅವಧಿ ಮುಗಿಯುವ ಹಂತದಲ್ಲಿದ್ದರೆ, ರಾಜ್ಯದ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅವುಗಳಿಗೆ ಬೇಡಿಕೆ ಇದೆಯೇ ಎಂಬುದನ್ನು ಪರಿಶೀಲಿಸಿ, ನಿಯಮಾನುಸಾರ ವರ್ಗಾಯಿಸುವ ಮೂಲಕ ಬಳಕೆಗೆ ಅವಕಾಶ ಕಲ್ಪಿಸಬಹುದು. ಅನಿವಾರ್ಯವಾಗಿ ಅವಧಿ ಮೀರಿದ ಔಷಧಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಆದರೆ, ಈ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ವಿಲೇವಾರಿ ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನೂ 2–3 ಟನ್ ಔಷಧಿ?ಕನ್ನಡಪ್ರಭಕ್ಕೆ ಲಭ್ಯವಾದ ಮಾಹಿತಿಯ ಪ್ರಕಾರ, ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಉಗ್ರಾಣದಲ್ಲಿ ಇನ್ನೂ 2ರಿಂದ 3 ಟನ್ಗಳಷ್ಟು ಔಷಧಿಗಳಿದ್ದು, ಅವುಗಳನ್ನು ವಿಲೇವಾರಿ ಮಾಡಬೇಕಿದೆ ಎನ್ನಲಾಗಿದೆ. ಈ ಔಷಧಿಗಳ ಖರೀದಿ, ಗುಣಮಟ್ಟ, ದಾಸ್ತಾನು ಹಾಗೂ ಅವಧಿ ಮುಗಿದಿರುವುದಕ್ಕೆ ಕಾರಣಗಳ ಕುರಿತು ಪರಿಶೀಲನೆ ನಡೆಸಬೇಕಿದೆ.
ರಾಜ್ಯಾದ್ಯಂತ ಜಾಲದ ಶಂಕೆಅಸಲಿ ಔಷಧಿಗಳ ಬದಲಿಗೆ ನಕಲಿ ಔಷಧಿಗಳನ್ನು ಖರೀದಿಸುವ ಅಕ್ರಮ ಕೇವಲ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರವಲ್ಲದೆ, ರಾಜ್ಯದ ಇತರೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಯೂ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಜಾಲ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡುತ್ತಿದ್ದು, ಖರೀದಿ ಮತ್ತು ಪೂರೈಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಸಾಧ್ಯತೆಯಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಔಷಧಿಗಳ ಖರೀದಿ, ಪೂರೈಕೆ, ಗುಣಮಟ್ಟ ಪರೀಕ್ಷೆ ಮತ್ತು ವಿಲೇವಾರಿ ಪ್ರಕ್ರಿಯೆಯ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ.
ತನಿಖೆಗೆ ಆಗ್ರಹಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 10 ಕ್ವಿಂಟಲ್ ಔಷಧಿಗಳು ಅವಧಿ ಮೀರಿವೆ ಎಂಬ ಕಾರಣಕ್ಕೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಔಷಧಿಗಳ ಖರೀದಿ ಮತ್ತು ವಿಲೇವಾರಿಯಲ್ಲಿ ಲೋಪಗಳಾಗಿದ್ದರೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದ್ದಾರೆ.