ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್: ಸುಳ್ಳು ಸಂದೇಶ ನಂಬದಿರಲು ಸೂಚನೆ

| Published : Sep 20 2024, 01:31 AM IST

ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್: ಸುಳ್ಳು ಸಂದೇಶ ನಂಬದಿರಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಿದೆ. ಸಾರ್ವಜನಿಕರು ಈ ರೀತಿಯ ಸಂದೇಶಕ್ಕೆ ಹಾಗೂ ಆಮಿಷಗಳಿಗೆ ನಂಬಿ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ರು.24 ಸಾವಿರ ಸ್ಕಾಲರ್‌ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ಯಾವುದಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಿದೆ. ಸಾರ್ವಜನಿಕರು ಈ ರೀತಿಯ ಸಂದೇಶಕ್ಕೆ ಹಾಗೂ ಆಮಿಷಗಳಿಗೆ ನಂಬಿ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ.

ಈ ಯೋಜನೆ ಸೌಲಭ್ಯ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಈ ಸಂದೇಶ ನೋಡಿದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಗೆ ಅಲೆದಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಈ ಯೋಜನೆಯ ಮುಖ್ಯ ಉದ್ದೇಶ 18 ವರ್ಷದೊಳಗಿನ ಮಕ್ಕಳನ್ನು ಕೌಟುಂಬಿಕ ಹಾಗೂ ವಿಸ್ತೃತ ಕುಟುಂಬದ ವಾತಾವರಣದಲ್ಲಿ ಆರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ವಾತ್ಸಲ್ಯ ಯೋಜನೆಯಡಿ ಪ್ರಾಯೋಜಕತ್ವ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಾದ್ಯಂತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನುಷ್ಠಾನ ಮಾಡಲಾಗುತ್ತಿದೆ.

ಮಕ್ಕಳನ್ನು ಗುರುತಿಸಲು ಕೆಲವು ವಿಶೇಷ ಮಾನದಂಡಗಳಿದ್ದು, 18 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ, ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತೃತ ಕುಟುಂಬದೊಡನೆ ಜೀವಿಸುತ್ತಿದ್ದರೆ, ಪೋಷಕರು ಜೀವಕ್ಕೆ ಬೆದರಿಕೆಯೊಡ್ಡುವ, ಗಂಭೀರ ಸ್ವರೂಪದ ಖಾಯಿಲೆಯ ಸಂತ್ರಸ್ತರಾಗಿದ್ದರೆ, ಪೋಷಕರು ಅಶಕ್ತರಾಗಿದ್ದರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥವಾಗಿದ್ದರೆ ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ ಅಂದರೆ, ವಸತಿ ರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬಾಲ ಕಾರ್ಮಿಕರು, ಬಾಲ್ಯ ವಿವಾಹದ ಸಂತ್ರಸ್ತರು, ಮಾನವ ಕಳ್ಳಸಾಗಾಣೆ ಸಂತ್ರಸ್ತರು, ಎಚ್‌ಐವಿ/ಏಡ್ಸ್ ಪರಿಣಾಮ ಪೀಡಿತ ಮಗು, ವಿಶೇಷಚೇತನ ಮಗು, ತಪ್ಪಿಸಿಕೊಂಡಿರುವ ಅಥವಾ ಓಡಿಬಂದಿರುವ ಮಗು, ಬಿಕ್ಷಾಟನೆ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ ಮಗು ಈ ಮಾನದಂಡಗಳಿಗೊಳಪಟ್ಟ ಮಕ್ಕಳಿಗೆ ಮಾಸಿಕ ರು.4 ಸಾವಿರ (ವರ್ಷಕ್ಕೆ ರೂ.48 ಸಾವಿರ) ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.

ಅರ್ಹ ಫಲಾನುಭವಿಗಳು ಯಾವುದೇ ಮದ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಾಂತಿನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ ಈ ಕಚೇರಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆ ಪಡೆದು ಅರ್ಜಿ ಭರ್ತಿ ಮಾಡಿ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಫಲಾನುಭವಿಗಳು ಅಥವಾ ಫಲಾನುಭವಿಗಳ ಪೋಷಕರು ನೇರವಾಗಿ ಬಂದು ಅರ್ಜಿ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಾಂತಿ ನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ (ದೂ.ಸಂ. 08272-228800) ಈ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.