ಸಾರಾಂಶ
ಹಾನಗಲ್ಲ: ಕಲಿಕೆ ಭಯಮುಕ್ತವಾಗಿರಬೇಕಲ್ಲದೆ ಅದೊಂದು ಸಂಭ್ರಮವಾದಲ್ಲಿ ಕಲಿಕಾರ್ಥಿಗಳ ಮನಸ್ಸು ಬುದ್ಧಿ ವಿವೇಕವನ್ನು ಎಚ್ಚರಿಸಿ ಶುದ್ಧ ಕಲಿಕೆಗೆ ಸಹಕಾರಿಯಾಗಬಲ್ಲದು ಎಂದು ಧಾರವಾಡದ ಬುಲ್‌ಬುಲೆ ಕರಿಯರ ಮತ್ತು ಗೈಡೆನ್ಸ ತರಬೇತಿಯ ನಿರ್ದೆಶಕ ಡಾ. ಗುರುರಾಜ ಬುಲ್‌ಬುಲೆ ತಿಳಿಸಿದರು.ಗುರುವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಶೈಕ್ಷಣಿಕ ಸ್ಪರ್ಧೆ ಜಾಗತಿಕವಾಗಿದೆ. ಕೇವಲ ಜ್ಞಾನವಿದ್ದರೆ ಸಾಲದು. ಪರೀಕ್ಷಾ ತಂತ್ರಗಳು, ಅದಕ್ಕಾಗಿ ಉತ್ತಮ ಸಲಹೆಗಳ ಅಗತ್ಯವೂ ಇದೆ. ತಾಳ್ಮೆ ಸಮಯ ಪ್ರಜ್ಞೆ ಅತ್ಯಂತ ಮುಖ್ಯ. ಶಿಕ್ಷಕನ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಶಿಕ್ಷಕ ಹೆಚ್ಚು ಸ್ಫೂರ್ತಿದಾಯಕವಾಗಬೇಕಾಗಿದೆ. ಶಿಕ್ಷಕರೆ ತಪ್ಪು ಮಾಡದಿರಿ. ಭವಿಷ್ಯಕ್ಕೆ ನೀವೇ ಮಾದರಿಯಾಗಿರಿ. ನಾಳೆಗಳು ನಿಮ್ಮ ನಡೆತೆಯನ್ನು ಅವಲಂಬಿಸಿವೆ ಎಂದರು.ನಿವೃತ್ತ ಪ್ರಾಧ್ಯಾಪಕ ಡಾ. ಪ್ರೇಮನಂದ ಲಕ್ಕಣ್ಣನವರ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾತಿ, ಧರ್ಮ, ರಾಜಕೀಯದಂತಹ ಚಟುವಟಿಕೆಗಳಿಂದ ದೂರವಿರುವ ವ್ಯಕ್ತಿಗಳು ಮಾದರಿಯಾಗಿ ಕಾಣುತ್ತಿದ್ದಾರೆ. ಭವಿಷ್ಯದ ಪೀಳಿಗೆಗೆ ಶಿಕ್ಷಕನ ಕೆಲಸ ಸದಾ ಆದರ್ಶ, ಮಾದರಿಯಾಗಬೇಕು. ಭವಿಷ್ಯದಲ್ಲಿ ಪ್ರಶಿಕ್ಷಣಾರ್ಥಿಗಳು ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಬೇಕಾಗಿದೆ. ಗುಣಾತ್ಮಕವಾದ ಬದುಕು ಕಟ್ಟಿಕೊಳ್ಳಲು ಮುಂದಾಗಿ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಶಿಕ್ಷಕನ ಪಾತ್ರ ಸಮಾಜವನ್ನು ಬದಲಾಯಿಸುವಲ್ಲಿ ಮಹತ್ವದ್ದು. ಶಿಕ್ಷಕರಿಗೆ ಬೇಕಾದ ಗುಣಗಳೆಂದರೆ ಉತ್ತಮ ದೀಕ್ಷಾ ವಿಧಾನಗಳು ಮತ್ತು ಸಮಾಜಕ್ಕೆ ಬೇಕಾದ ಸಕಾರಾತ್ಮಕ ಸೇವೆಗಳು. ಮಕ್ಕಳಲ್ಲಿ ಸೌಕರ್ಯಪೂರ್ಣ ಸಂವಹನ ಹಾಗೂ ನೈತಿಕತೆ ಬೆಳೆಸಬೇಕು ಎಂದರು.ವಿದ್ಯಾರ್ಥಿ ಪ್ರತಿನಿಧಿಗಳಾದ ಪೃಥ್ವಿ ಕಾಶೆಟ್ಟಿ, ಷಡಕ್ಷರಿ ಜಿ.ಎಸ್. ಕಾಲೇಜಿನ ಅನುಭವನ್ನು ಹಂಚಿಕೊಂಡರು. ಕವಿವಿ ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಡಾ. ಆರ್. ವಿ. ಮಾಡಳ್ಳಿ ಮತ್ತು ಡಾ.ಜಿ.ಟಿ. ಜಿತೇಂದ್ರ ಮತ್ತು ೨೦೨೦-೨೨ನೇ ಸಾಲಿನ ಕವಿವಿಯ ೯ನೇ ರ‍್ಯಾಂಕ್ ವಿಜೇತೆ ಸೀಮಾ ತಿಳುವಳ್ಳಿ ಅವರನ್ನು ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಹುಲ್ಲೂರ, ಡಾ. ಹರೀಶ ತಿರಕಪ್ಪ, ಡಾ. ಪ್ರಕಾಶ. ಜಿ.ವಿ., ಡಾ. ರುದ್ರೇಶ. ಬಿ. ಎಸ್., ಡಾ. ವಿಶ್ವನಾಥ ಬೋಂದಾಡೆ, ಪ್ರೊ. ದಿನೇಶ ಆರ್., ಮಹೇಶ ಅಕ್ಕಿವಳ್ಳಿ, ಎಂ.ಎಂ.ನಿಂಗೋಜಿ, ಎಸ್.ಸಿ. ವಿರಕ್ತಮಠ, ಮಂಜಪ್ಪಾ ಪರಶಿಕ್ಯಾತಿ, ಜಗದೀಶ ನಿಂಬಕ್ಕನವರ, ಮಾಲತೇಶ ಜಡೆದ, ಎಲ್.ಎಫ್. ಹಾನಗಲ್ಲ ಪಾಲ್ಗೊಂಡಿದ್ದರು.ಅನ್ನಪೂರ್ಣಾ ಸಂಗಡಿಗರು ದೇಶಭಕ್ತಿ ಗೀತೆಗೆ ನೃತ್ಯ ಮಾಡಿದರು. ಆಶಾ ವಿ.ಎಸ್. ಪ್ರಾರ್ಥಿಸಿದರು. ಸಂಗೀತಾ ಬೆಳವತ್ತಿ ಸ್ವಾಗತಿಸಿದರು. ಸ್ಫೂರ್ತಿ ಕೇಶವ್ ನಾಯಕ್ ಹಾಗೂ ಸ್ವಾತಿ ಬೈಲಣ್ಣನವರ ನಿರೂಪಿಸಿದರು.