ಸಾರಾಂಶ
ಕೋಲಾರ: ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆದ್ಯತೆ ಮೇಲೆ ಚರ್ಚೆ ಆಗಬೇಕು. ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೇರುವುದಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಸಭೆಗೆ ಸರಿಯಾದ ಮಾಹಿತಿ ಮತ್ತು ಉತ್ತರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಎಚ್ಚರಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಜೂನ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿ, ಮಾರುಕಟ್ಟೆ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ, ನೀರಾವರಿ ಇಲಾಖೆಗಳ ಅಧಿಕಾರಿಗಳು ಕೆಡಿಪಿ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ವಾಸ್ತವಿಕ ವರದಿ ನೀಡುವದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಲೋಕೋಪಯೋಗಿ, ನೀರಾವರಿ ಮತ್ತು ಇತರ ಪ್ರಮುಖ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಚುರುಕುಗೊಳಿಸಿ ಎಂದು ಸಚಿವರು ಸೂಚಿಸಿದರು.
ಅಗತ್ಯ ಗೊಬ್ಬರ, ಬಿತ್ತನೆ ಬೀಜ ದಾಸ್ತಾನು:ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಮಾತನಾಡಿ, ಈ ಮಾಹೆಯಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುತ್ತಿದೆ. ಮುಂದಿನ ೧ ತಿಂಗಳು ನಿರೀಕ್ಷಿಸಿ ಮಳೆ ಬಾರದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ರಾಗಿ ಬಿತ್ತನೆ ನಡೆದಿದ್ದು, ಬೆಳೆ ಕಟಾವಿಗೆ ಬಂದಿವೆ ಎಂದು ಸಭೆಗೆ ತಿಳಿಸಿದರು. ಅಗತ್ಯ ಬೀಜ, ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು.
ಆಯಾ ಗ್ರಾಪಂಗಳಿಗೆ ಜಲ ಜೀವನ ಮಿಷನ್ ಜವಾಬ್ದಾರಿ: ಸರ್ಕಾರದ ಮಹತ್ವಕಾಂಕ್ಷಿ ಯೋಚನೆಯಾಗಿದ್ದು, ಈ ಯೋಜನೆಯಡಿ ೧೩೬೫ ಕೋಟಿ ರುಪಾಯಿ ಅನುದಾನ ಮಂಜೂರಾಗಿದ್ದು, ಪ್ರತಿಯೊಂದು ಮನೆಗಳಿಗೂ ಶೀಘ್ರವಾಗಿ ನಲ್ಲಿ ನೀರು ಸಂಪರ್ಕ ನೀಡಬೇಕು. ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಆಯಾ ಗ್ರಾಪಂಗಳಿಗೆ ವಹಿಸಲಾಗಿದೆ. ಉಳಿದ ಗ್ರಾಪಂಗಳಿಗೆ ನೀರು ಸರಬರಾಜು ವ್ಯವಸ್ಥೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನುಗಳನ್ನು ಗುರುತಿಸಿ ಅವುಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಕೆರೆ, ಗೋಮಾಳ ಅತಿಕ್ರಮಣ ಆಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಯೋಜನೆಯನ್ನು ಸ್ಥಳೀಯ ಶಾಸಕರು ಹಾಗೂ ವಿಧಾನಸಭಾ ಸದಸ್ಯರೊಂದಿಗೆ ಚರ್ಚಿಸಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿ ಕಡ್ಡಾಯವಾಗಿ ಅವರಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಸೂಚಿಸಿದರು.ಪಶು ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿಗೆ ಕ್ರಮ: ಕೋಲಾರದಲ್ಲಿ ೧೦೮ ಪಶು ಆಸ್ಪತ್ರೆಗಳಿದ್ದು, ೭೫ ಜನ ವೈದ್ಯರಿದ್ದು, ವೈದ್ಯರ ಕೊರತೆ ಇದೆ ಎಂದು ಪಶುವೈದ್ಯ ಅಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು, ವೈದ್ಯರ ಕೊರತೆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣವೇ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಪಶು ವೈದ್ಯಾಧಿಕಾರಿಗಳು ಸಂಬಂಧಿಸಿದ ರೋಗಕ್ಕೆ ಆಸ್ಪತ್ರೆಯಿಂದಲೇ ಔಷಧಿ ವಿತರಿಸಬೇಕು. ವೈದ್ಯರು ಪ್ರತಿ ತಾಲೂಕಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹರಿಸಬೇಕೆಂದು ಸೂಚಿಸಿದರು.
ಆರೋಗ್ಯ ಇಲಾಖೆ: ಸರ್ಕಾರಿ ವೈದ್ಯರಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಪಟ್ಟಿ ನೀಡಿ ಅಂಥವರನ್ನು ತಕ್ಷಣವೇ ಅಮಾನತುಗೊಳಿಸಲಾಗುವುದೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಚಿವರು ತಿಳಿಸಿದರು.ಜಿಲ್ಲಾ ಆಸ್ಪತ್ರೆಯನ್ನು ಮೇಲ್ಧರ್ಜೆಗೆ ಏರಿಸಲಾಗುತ್ತಿದ್ದು, ಡಯಾಲಸಿಸ್, ಸಿಟಿ ಸ್ಕಾನ್ ಇನ್ನು ಮುಂತಾದ ಅನುಕೂಲಗಳು ಪ್ರತಿಯೊಬ್ಬರಿಗೂ ದೊರಕುವಂತೆ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ ಕಡ್ಡಾಯವಾಗಿ ತಾಲೂಕುಗಳಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಬೇಕೆಂದರು.
ಸಭೆಯಲ್ಲಿ ಸಂಸದ ಮಲ್ಲೇಶಬಾಬು, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಎಲ್.ಅನಿಲಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಕೆಜಿಎಫ್ ಜಿಲ್ಲಾರಕ್ಷಣಾಧಿಕಾರಿ ಶಾಂತರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಇದ್ದರು.