ಸಾರಾಂಶ
ಊರಿನ ಅಭಿವೃದ್ಧಿ ಮತ್ತು ಉತ್ತಮ ಸಂಸ್ಕಾರ ನೀಡುವಲ್ಲಿ ಶಾಲೆ ಮತ್ತು ದೇವಸ್ಥಾನ ಎರಡು ಕಣ್ಣಿದಂತೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲದಿರುವ ಕಾಲಘಟ್ಟದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿ ಬದುಕು ಕಟ್ಟಿಕೊಂಡವರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಕುಮಟಾ: ಊರಿನ ಅಭಿವೃದ್ಧಿ ಮತ್ತು ಉತ್ತಮ ಸಂಸ್ಕಾರ ನೀಡುವಲ್ಲಿ ಶಾಲೆ ಮತ್ತು ದೇವಸ್ಥಾನ ಎರಡು ಕಣ್ಣಿದಂತೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲದಿರುವ ಕಾಲಘಟ್ಟದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿ ಬದುಕು ಕಟ್ಟಿಕೊಂಡವರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಹಂದಿಗೋಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.ಮಗುವಿಗೆ ಅಗತ್ಯವಿರುವ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬ ಪಾಲಕರ ಜವಾಬ್ದಾರಿ ಅಡಗಿದೆ. ಶಾಲೆಯ ಸ್ಥಿತಿ-ಗತಿಯೇ ಊರಿನ ಅಭಿವೃದ್ಧಿಯ ದಿಕ್ಸೂಚಿ. ಹಂದಿಗೋಣ ಶಾಲೆ ಹಲವಾರು ಸಾಧಕರನ್ನು ಸೃಷ್ಟಿಸಿದೆ. ಹಂದಿಗೋಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಾಲೆ ಪ್ರಾರಂಭವಾಗುವಲ್ಲಿ ಆಗಿನ ಕಾಲದ ಜನರ ಶ್ರಮ ಅವರ್ಣನೀಯ. ಹೀಗಾಗಿ ನಾವೆಲ್ಲರೂ ಶಿಕ್ಷಣದ ಮೌಲ್ಯ ಅರಿತು ಭವಿಷ್ಯದ ಸಮಾಜ ಕಟ್ಟೋಣ ಎಂದರು.
ಮುಖ್ಯ ಅತಿಥಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ಶಿಕ್ಷಣ ಒಂದು ಪ್ರಾದೇಶಿಕ ವ್ಯವಸ್ಥೆಯಾಗಿರದೆ ಇಡೀ ಜಗತ್ತಿನ ವ್ಯವಸ್ಥೆಗೆ ತೆರೆದುಕೊಂಡಿದೆ. ವಿಶ್ವದಲ್ಲೆಡೆ ಭಾರತೀಯರು ವಿಜೃಂಭಿಸುತ್ತಿದ್ದಾರೆ. ಅನೇಕ ದೇಶಗಳ ಚುಕ್ಕಾಣಿ ಹಿಡಿದಿರುವುದಕ್ಕೆ ಈ ದೇಶದ ಶಿಕ್ಷಣ ವ್ಯವಸ್ಥೆಯ ಶಕ್ತಿ ಅಂಥದ್ದಾಗಿದೆ. ಕಳೆದ ನೂರು ವರ್ಷಗಳಿಂದ ಉತ್ತಮ ಸುಶಿಕ್ಷಿತ ಪ್ರಜೆ ರೂಪಿಸಿದ ಕೀರ್ತಿ ಹಂದಿಗೋಣ ಶಾಲೆಗೆ ಸಲ್ಲುತ್ತದೆ ಎಂದರು.ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಶಿಕ್ಷಣವೆಂದರೆ ನಿಂತ ನೀರಲ್ಲ. ಹರಿಯುವ ನದಿಯಂತೆ ವಿಶಾಲವಾಗಿದ್ದು, ಎಲ್ಲರೂ ಶಿಕ್ಷಣ ಪಡೆಯುವುದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಶತಮಾನೋತ್ಸವದ ಸ್ಮರಣ ಸಂಚಿಕೆ ಶತಮಾನ ಪ್ರಭಾ ಬಿಡುಗಡೆಗೊಳಿಸಿ,ಅಧ್ಯಕ್ಷತೆ ವಹಿಸಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿ ಎಲ್ಲ ವರ್ಗದವರು ಸೇರಿ ಅನ್ಯೋನ್ಯವಾಗಿ ಜೀವಿಸುವುದರ ಜತೆಗೆ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಶಾಲೆಗೆ ಸಹಕರಿಸುತ್ತಿರುವುದು ಮಾದರಿ. ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಶತಮಾನಗಳಿಂದ ಕಂಡ ಕನಸು ಇಂದು ನನಸಾಗುವ ಸಂದರ್ಭ.ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಹತ್ತರವಾದದ್ದು ಎಂದರು.ಗ್ರಾಪಂ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯ ನಾಗರಾಜ ಹೆಗಡೆ, ಕೃಷಿ ವಿಜ್ಞಾನಿ ಗಣಪತಿ ಮುಕ್ರಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ವೆಂಕಟರಮಣ ಪಟಗಾರ ಮಾತನಾಡಿದರು.
ವೇದಿಕೆಯಲ್ಲಿ ಕಲಭಾಗ ಗ್ರಾಪಂ ಅಧ್ಯಕ್ಷ ಮಂಜುನಾಥ ನಾಯ್ಕ, ಗ್ರಾಪಂ ಸದಸ್ಯ ಸುರೇಶ ಪಟಗಾರ, ನಾಗರಾಜ ಹೆಗಡೆ, ಪಿಡಿಒ ಡಿ.ಪ್ರಜ್ಞಾ, ಬಿಇಒ ರಾಜೇಂದ್ರ ಭಟ್ಟ, ನಿವೃತ್ತ ಸಿಪಿಐ ಎನ್.ಆರ್. ಮುಕ್ರಿ,ನಿವೃತ್ತ ಶಿಕ್ಷಕ ಎಂ.ಆರ್ ಉಪಾಧ್ಯಾಯ, ಭಾರತಿ ಪಟಗಾರ, ಎಸ್ಡಿಎಂಸಿ ಅಧ್ಯಕ್ಷ ಗಣಪತಿ ಪಟಗಾರ, ಉಪಾಧ್ಯಕ್ಷೆ ಶಾರದಾ ಮುಕ್ರಿ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ವೆಂಕಟ್ರಮಣ ಪಟಗಾರ, ಚಂದ್ರಕಾಂತ ಮುಕ್ರಿ ಇದ್ದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎನ್.ಪಿ.ಭಾಗ್ವತ, ಕೃಷಿ ವಿಜ್ಞಾನಿ ಗಣಪತಿ ಮುಕ್ರಿ, ಇಸ್ರೋ ವಿಜ್ಞಾನಿ ಶಾಂತಲಾ ಹೆಗಡೆ, ಕೃಷಿ ವಿಜ್ಞಾನಿ ವಿವೇಕ ಭಟ್, ನಿವೃತ್ತ ಸಿಪಿಐ ಎನ್.ಆರ್.ಮುಕ್ರಿ, ಸಮಾಜ ಸೇವಕ ತಿಮ್ಮು ಮುಕ್ರಿ ಇವರನ್ನು ಸನ್ಮಾನಿಸಲಾಯಿತು.
ಮುಖ್ಯಾಧ್ಯಾಪಕಿ ಸವಿತಾ ನಾಯ್ಕ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ಭಾಗವತ ಪ್ರಾಸ್ತಾವಿಕ ಮಾತನಾಡಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ ವಂದಿಸಿದರು. ಗಣೇಶ ಜೋಶಿ ಮತ್ತು ವಿಷ್ಣು ಪಟಗಾರ ನಿರೂಪಿಸಿದರು.ಬಳಿಕ ಶಿಕ್ಷಕರು ಹಾಗೂ ಪೂರ್ವ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ನಾರಾಯಣ ಭಾಗ್ವತ ಸಂಯೋಜಿಸಿ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೂರ್ವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಗಮನ ಸೆಳೆಯಿತು.