ಸಾರಾಂಶ
ಕನ್ನಡಪ್ರಭ ವಾರ್ತೆ ಕೊಡೇಕಲ್
ಪ್ರಜೆಗಳೇ ಪ್ರಭುಗಳಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತು ಕಾರ್ಯಕ್ರಮವು ಮಹತ್ತರವಾಗಿದ್ದು, ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ತಿಳಿದಂತಾಗುವುದು ಎಂದು ಶಾಲಾ ಪ್ರಧಾನ ಗುರು ಚೆನ್ನಯ್ಯ ವಸ್ತ್ರದ ಹೇಳಿದರು.ಕೊಡೇಕಲ್ ಸಮೀಪದ ಆರ್. ಕೆ. ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ಶಾಲಾ ಸಂಸತ್ತು ಸದಸ್ಯರನ್ನು ನೈಜ ಚುನಾವಣಾ ಮಾದರಿಯಲ್ಲಿ ಆಯ್ಕೆ ಮಾಡಲಾಯಿತು.
ಮೊದಲಿಗೆ ವಿದ್ಯಾರ್ಥಿಗಳು ನಾಮಪತ್ರವನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿ ಶಿಕ್ಷಕ ಚೆನ್ನಯ್ಯ ವಸ್ತ್ರದ ಅವರಿಗೆ ಸಲ್ಲಿಸಿದರು.ನಂತರ ನಾಮಪತ್ರ ಪರಿಶೀಲಿಸಿ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಗಳು ನಡೆದವು. ನೈಜ ಚುನಾವಣೆಯಂತೆ ವಿದ್ಯಾರ್ಥಿಗಳಿಗೆ ಚಿಹ್ನೆಗಳ ಪಟ್ಟಿ ನೀಡಿ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಚುನಾವಣೆ ನಡೆಸಲಾಯಿತು. ಮತಗಟ್ಟೆ ಅಧಿಕಾರಿ, ಪಿಆರ್‌ಒ, ಎ.ಪಿ.ಆರ್.ಓ.ಡಿ. ದರ್ಜೆ ಸಹಾಯಕರು, ಆರಕ್ಷಕರು ಎಲ್ಲಾ ಇಲ್ಲಿ ಕಂಡು ಬಂದರು.
ಚಿಹ್ನೆ ಸಹಿತ ಇರುವ ಮುದ್ರಿತ ಮತಪತ್ರ, ಮತದಾರರ ಪಟ್ಟಿ, ವೋಟಿಂಗ್ ಕಂಪಾರ್ಟಮೆಂಟ್, ರಬ್ಬರ್ ಮೊಹರು, ಅಳಿಸಿಹಾಕಲಾಗದ ಶಾಯಿ, ಚುನಾವಣೆ ಸಾಮಗ್ರಿ ಪಡೆಯುವಿಕೆ, ಹಿಂತಿರುಗಿಸುವಿಕೆ, ಚುನಾವಣಾ ಏಜೆಂಟರ ನೇಮಕಾತಿ, ಹಾಜರಾತಿ, ಕರ್ತವ್ಯದ ಪ್ರಮಾಣ ಪತ್ರ ಬಳಸಿ ಮತ ಚಲಾವಣೆ ಇವೆಲ್ಲ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಕಂಡುಬಂದಿತು.ಸರದಿ ಸಾಲಿನಲ್ಲಿ ಬಂದ ವಿದ್ಯಾರ್ಥಿಗಳಿಗೆ ಬಲಗೈ ತೊರುಬೆರಳಿಗೆ ಶಾಯಿಗುರುತು ಹಚ್ಚುವುದರ ಮೂಲಕ ಮತದಾನ ಮಾಡಲು ಅನೂಕೂಲ ಮಾಡಲಾಯಿತು. ಮತದಾನ ಮುಗಿದ ನಂತರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು.
ಅತಿ ಹೆಚ್ಚು ಮತ ಪಡೆದ ಮಾಲಾಶ್ರೀ ಸಿದ್ದಾಪುರ ಮುಖ್ಯಮಂತ್ರಿಯಾಗಿ, ದೀಪಾ ಉಪ ಮುಖ್ಯಮಂತ್ರಿಯಾಗಿ, ಭಾಗ್ಯಶ್ರೀ ಶಿಕ್ಷಣ ಮಂತ್ರಿಯಾಗಿ, ವಿಶಾಲ ಕ್ರೀಡಾಮಂತ್ರಿಯಾಗಿ, ಪ್ರಜ್ವಲ್ ಪರಿಸರ ಮಂತ್ರಿಯಾಗಿ, ಮಧು ಸಾಂಸ್ಕೃತಿಕ ಮಂತ್ರಿಯಾಗಿ, ಸರಸ್ವತಿ ಹಣಕಾಸು ಮಂತ್ರಿಯಾಗಿ ಹಾಗೂ ಪಲ್ಲವಿ ಪಾಂಡುರಂಗ ಆರೋಗ್ಯ ಮಂತ್ರಿಯಾಗಿ ಮಂತ್ರಿಮಂಡಲವನ್ನು ರಚಿಸಲಾಯಿತು.ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಚುನಾವಣೆ ನಡೆಸಸಲು ಶಿಕ್ಷಕರಾದ ಚೆನ್ನಯ್ಯ ವಸ್ತ್ರದ ಚುನಾವಣಾ ಅಧಿಕಾರಿಯಾಗಿ, ನೀಲಪ್ಪ ತೆಗ್ಗಿ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಶಿಕ್ಷಕಿ ರೇಖಾ ಕೊಡೇಕಲ್ ಮಠ ಚುನಾವಣೆಯ ಕಾರ್ಯ ನಿರ್ವಹಿಸಿದರು.
ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿದಿನವು ತಪ್ಪದೇ ಶಾಲೆಗೆ ಹಾಜರಾಗಿ ನಿಮ್ಮ ನಿಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದರೊಂದಿಗೆ ಗುಣಾತ್ಮಕ ಶಿಕ್ಷಣ ಪಡೆಯುವುದರಲ್ಲಿ ಸಕ್ರಿಯರಾಗಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕೇಂದು ಶಾಲಾ ಪ್ರಧಾನಗುರುಗಳು ಚುನಾಯಿತ ವಿದ್ಯಾರ್ಥಿಗಳಿಗೆ ತಿಳಿಸಿದರು.