ಸಾರಾಂಶ
ಬಂಗಾರಪೇಟೆ : ತಾಲೂಕಿನಾದ್ಯತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನಿಭಾಯಿಸಲು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆದರೂ ಸಹ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲವೆಂದು ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ.
ಮುತ್ತೇನಹಳ್ಳಿ ಶಾಲೆಗೆ ಬೀಗ
ಮತ್ತೊಂದು ಕಡೆ ತಾಲೂಕಿನ ಮುತ್ತೇನಹಳ್ಳಿ ಗ್ರಾಮದಲ್ಲಿ ಒಬ್ಬ ವಿದ್ಯಾರ್ಥಿಗೆ ಇಬ್ಬರು ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಣ ಇಲಾಖೆ ಗೊಂದಲ ಸೃಷ್ಟಿಸಿದೆ. ಇದಕ್ಕೆ ಸಾರ್ವಜನಿಕವಾಗಿ ಆಕ್ರೊಶ ವ್ಯಕ್ತವಾದ ನಂತರ ಇಬ್ಬರು ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಶಾಲೆಗೆ ಶಾಶ್ವತವಾಗಿ ಬೀಗ ಜಡಿಯಲಾಗಿದೆ. ಶಾಲೆಯಲ್ಲಿದ್ದ ಏಕೈಕ ವಿದ್ಯಾರ್ಥಿನಿಯನ್ನು ಬೂದಿಕೋಟೆ ಕೆಪಿಎಸ್‌ಇ ಶಾಲೆಗೆ ದಾಖಲಿಸಲಾಗಿದೆ.
ಮುತ್ತೇನಹಳ್ಳಿ ಶಾಲೆಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಪ್ರಕಾರ, ಶಾಲೆಯಲ್ಲಿ ಇಬ್ಬರೂ ಶಿಕ್ಷಕಿಯರೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಶಾಲೆಯಲ್ಲಿ ಮೊಟ್ಟೆ, ಪೌಷ್ಟಿಕ ಆಹಾರವನ್ನು ನೀಡುತ್ತಿರಲಿಲ್ಲ. ಇದರಿಂದ ಬೇಸದ ನನ್ನ ಜೊತೆಯಿದ್ದ ಮಕ್ಕಳು ಬೇರೆ ಶಾಲೆಗಳಿಗೆ ಸೇರಿದ್ದಾರೆ. ಆದ್ದರಿಂದ ನಾನೂ ಸಹ ಬೇಲೆ ಶಾಲೆಗೆ ಹೋಗುತ್ತೇನೆ ಕಳುಹಿಸಿಕೊಡಿ ಎಂದು ಅಳಲನ್ನು ತೋಡಿಕೊಂಡಿದ್ದಾಳೆ.
ಶಿಕ್ಷಕಿಯರಿಂದಾಗಿ ಮುಚ್ಚಿದ ಶಾಲೆ
ಮುತ್ತೇನಹಳ್ಳಿ ಶಾಲೆಯಲ್ಲಿ ರೂಪ ಎಂಬ ಶಿಕ್ಷಕಿ ಕಳೆದ ೨೧ ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಶಾಲೆಯಲ್ಲಿ ವಸಂತ ಎಂಬ ಶಿಕ್ಷಕಿ ಸಹ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಬ್ಬರೂ ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದರು ಎಂಬುದು ಪೋಷಕರ ಆರೋಪ.
ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ದಾಖಲಾತಿಯಲ್ಲಿ ಕುಸಿಯಲಾರಂಭಿಸಿತು. ಕಳೆದ ವರ್ಷ ಶಾಲೆಯಲ್ಲಿ ಶಾಲೆಯಲ್ಲಿ ೮ ಮಕ್ಕಳಿದ್ದರು. ಆದರೆ ಶಿಕ್ಷಕಿಯರ ನಡುವಿನ ಮುಸಿಕಿನ ಗುದ್ದಾಟದಿಂದ ಪೋಷಕರು ಬೇಸರಗೊಂಡು ೭ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗಳಿಗೆ ದಾಖಲು ಮಾಡಿಸಿದ್ದಾರೆ. ಇದರಿಂದಾಗಿ ಒಬ್ಬ ಬಾಲಕಿ ಮಾತ್ರ ಶಾಲೆಯಲ್ಲಿ ಉಳಿದಿದ್ದಳು. ಶಿಕ್ಷಕರಿಯರ ವಿರುದ್ಧ ದೂರು
ಕಳೆದ ಹಲವು ವರ್ಷಗಳಿಂದ ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲದೆ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದರು, ಇದನ್ನು ಕಂಡಂತಹ ಪೋಷಕರು ಕಳೆದ ವರ್ಷವೇ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಧಿಕಾರಿಗಳು ಸಹ ಶಾಲೆಗೆ ಭೇಟಿ ನೀಡಿ, ಇಬ್ಬರೂ ಶಿಕ್ಷಕರನ್ನು ಬೂದಿಕೋಟೆಯ ಕೆಪಿಎಸ್ ಶಾಲೆಗೆ ನಿಯೋಜನೆ ಮಾಡಿದ್ದರು. ಆಗಲೂ ಸಹ ಶಿಕ್ಷಕಿಯರು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪುನಃ ಮುತ್ತೇನಹಳ್ಳಿ ಶಾಲೆಗೆ ಮರಳಿದ್ದರು.ಶಾಲೆಯಲ್ಲಿ ೧೧ ಕ್ಕಿಂತ ಕಡಿಮೆ ಮಕ್ಕಳಿದ್ದರೆ ಒಬ್ಬ ಶಿಕ್ಷಕರನ್ನು, ಅದಕ್ಕೂ ಮೇಲ್ಪಟ್ಟ ಇದ್ದರೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು ಎಂಬುದು ಸರ್ಕಾರದ ಆದೇಶವಿದೆ. ಆದರೆ ಶಾಲೆಯಲ್ಲಿ 8 ಮಕ್ಕಳಿದ್ದರು ಶಿಕ್ಷಣ ನೀಡುವಲ್ಲಿ ಇಬ್ಬರೂ ಶಿಕ್ಷಕಿಯರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಇತ್ಯಾದಿಗಳು ಸಹ ಮಗುವಿಗೆ ನೀಡದೆ ಕಡೆಗಣಿಸಿದ್ದಾರೆ. ಆಧಿಕಾರಿಗಳಿಗೆ ಇಲ್ಲಿನ ವಾಸ್ತವ ಸ್ಥಿತಿ ಗೊತ್ತಿದ್ದರೂ ಸಹ ತಮಗೇನು ಅರಿವಿಲ್ಲದಂತೆ ಕಣ್ಣುಮುಚ್ಚಿ ಕುಳಿತ್ತಿದ್ದಾರೆಂದು ಬೇಸರಗೊಂಡ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ. ಗ್ರಾಮದಲ್ಲೇ ಸರ್ಕಾರಿ ಶಾಲೆ ಇದ್ದರೂ ಅಲ್ಲಿದ್ದ ಶಿಕ್ಷಕಿಯರಿಬ್ಬರ ಒಳಜಗಳದಿಂದ ಮಕ್ಕಳು ಬೇರೆ ಗ್ರಾಮದ ಶಾಲೆಗೆ ಹೋಗುವಂತಾಗಿದೆ.ಕೋಟ್.........
ಮುತ್ತೇನಹಳ್ಳಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ ಇಬ್ಬರೂ ಶಿಕ್ಷಕಿಯರನ್ನು ಬೇರೆಡೆಗೆ ನಿಯೋಜನೆ ಮಾಡಿ ಆದೇಶಿಸಲಾಗಿದೆ. ಶಾಲೆಯಲ್ಲಿ ಇರುವಂತಹ ಏಕೈಕ ಭಾಲಕಿಯನ್ನು ಬೂದಿಕೋಟೆ ಕೆಪಿಎಸ್‌ಇ ಶಾಲೆಗೆ ದಾಖಲಿಸಿ ಶಾಲೆಗೆ ಸದಸ್ಯಕ್ಕೆ ಬೀಗ ಹಾಕಲಾಗಿದೆ.
ಸುಕನ್ಯ, ಬಿಇಒ.