ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದ್ದಾರೆ.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ಬುಧವಾರ ನಡೆದ ‘ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರುದ್ಧ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು. ನಾಳೆಯ ಬಗ್ಗೆ ಚಿಂತಿಸಬೇಕು. ಮಾನವನ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಭವಿಷ್ಯದಲ್ಲಿ ಉತ್ತಮ ಗುರಿ ಸಾಧಿಸಲು ನಿರಂತರ ಪ್ರಯತ್ನಿಸಬೇಕು ಎಂದು ಅವರು ಸಲಹೆ ಮಾಡಿದರು.ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗಾಬಾರದು. ಮಾದಕ ವಸ್ತುಗಳಿಗೆ ಅವಲಂಬಿತರಾದರೆ ಅದರಿಂದ ಪುನಃ ಹೊರಬರುವುದು ತುಂಬಾ ಕಷ್ಟ ಎಂದರು.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 2023 ರಲ್ಲಿ 101 ಪ್ರಕರಣ ದಾಖಲಾಗಿದೆ. 89.217 ಕೆ.ಜಿ.ಗಾಂಜಾ, 154.26 ಗ್ರಾಂ. ಟ್ಯಾಬ್ಲೆಟ್, ಎಲ್‌ಎಸ್‌ಡಿ 9 ಬ್ಲಾಕ್ಸ್, 3.4 ಗ್ರಾಂ. ಕೊಕೆನ್ ವಶಕ್ಕೆ ಪಡೆಯಲಾಗಿದೆ. 2024 ರಲ್ಲಿ 31 ಪ್ರಕರಣ ದಾಖಲಾಗಿದ್ದು, 8.249 ಕೆ.ಜಿ.ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.ಅಕ್ರಮವಾಗಿ ಮಾದಕ ವಸ್ತು ಬಳಕೆ, ಸೇವನೆ, ಸಾಗಾಟದ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಕೆ.ರಾಮರಾಜನ್ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ಯುವಜನರಲ್ಲಿ ಮಾದಕ ವಸ್ತು ಮತ್ತು ಮಾನವ ಕಳ್ಳಸಾಗಣಿಕೆ ಹೆಚ್ಚುತ್ತಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರ ದುಷ್ಪಾರಿಣಾಮ ಬೀರುತ್ತಿದೆ. ಇವುಗಳನ್ನು ಹತ್ತಿಕ್ಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ಯುವಜನರು ಮಾದಕ ವಸ್ತುಗಳಿಂದ ದೂರವಿರಲು ಪೋಷಕರೊಂದಿಗೆ ಸಮಾಲೋಚಿಸಬೇಕು. ತಮ್ಮ ಸಹಪಾಠಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದರೆ ಪೋಷಕರಿಗೆ ತಿಳಿಸಬೇಕು ಎಂದರು.
ಡಿವೈಎಸ್‌ಪಿ ಮಹೇಶ್ ಕುಮಾರ್ ಮಾತನಾಡಿ ಮಾದಕ ವಸ್ತುಗಳ ಸೇವನೆಗೆ ತುತ್ತಾದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಯುವ ಜನರು ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಪದಾರ್ಥಗಳನ್ನು ಬಳಸುವುದರಿಂದ ಮಾನಸಿಕ ಖಿನ್ನತೆ, ನಿದ್ರಾಹೀನತೆ ಸೇರಿದಂತೆ ಗಂಭೀರವಾದ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದರು.ಪೌರಾಯುಕ್ತ ವಿಜಯ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಮಾದಕ ವಸ್ತುಗಳ ಬಳಕೆಗೆ ಇಳಿದವರು ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ಅನವಶ್ಯಕ ವಿವಾದಗಳನ್ನು ಸೃಷ್ಟಿಸುವುದು ಮೊದಲಾದ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗುವುದು ಕಂಡು ಬರುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದ ರಾಜು ಮತ್ತು ತಂಡದವರಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಬೀದಿನಾಟಕ ಪ್ರದರ್ಶಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸದಾಶಿವ ಪಲ್ಲೇದ್, ಅಂಬೆಕಲ್ಲು ನವೀನ್, ರವೀಂದ್ರ ರೈ, ಇತರರು ಇದ್ದರು. ಮಡಿಕೇರಿ ನಗರ ಸಿಪಿಐ ಪಿ.ಕೆ.ರಾಜು ಸ್ವಾಗತಿಸಿದರು. ದೊರೇಶ್ ಬಿ.ಜಿ.ಪ್ರಾರ್ಥಿಸಿದರು. ದಿವ್ಯ ಮಂದಪ್ಪ ನಿರೂಪಿಸಿದರು. ಪಿಎಸ್‌ಐ ಲೋಕೇಶ್ ವಂದಿಸಿದರು.