ಖಾಸಗಿ ಶಾಲೆಗಳ ಮಾನ್ಯತೆ/ನವೀಕರಣ ಪ್ರಕ್ರಿಯೆ ಮುಗಿದಿಲ್ಲ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇದುವರೆಗೂ ಮಾನ್ಯತೆ ಪಡೆಯದ ಅಥವಾ ನವೀಕರಣ ಮಾಡಿಕೊಳ್ಳದ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳ ಹೆಸರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಲು ಮುಂದಾಗಿದೆ.

ಲಿಂಗರಾಜು ಕೋರಾ

 ಬೆಂಗಳೂರು : ಪರೀಕ್ಷಾ ದಿನಗಳು ಹತ್ತಿರವಾಗುತ್ತಿದ್ದರೂ ಶಾಲಾ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ಮಾನ್ಯತೆ/ನವೀಕರಣ ಪ್ರಕ್ರಿಯೆ ಮುಗಿದಿಲ್ಲ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇದುವರೆಗೂ ಮಾನ್ಯತೆ ಪಡೆಯದ ಅಥವಾ ನವೀಕರಣ ಮಾಡಿಕೊಳ್ಳದ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳ ಹೆಸರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಲು ಮುಂದಾಗಿದೆ.

ಶಿಕ್ಷಣ ಇಲಾಖೆಯ ಈ ಗೊಂದಲಕಾರಿ ಕ್ರಮದಿಂದ ಒಂದುಕಡೆ ಈವರೆಗೂ ಮಾನ್ಯತೆ ಪಡೆಯದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಕ್ಕೀಡಾಗಿದ್ದಾರೆ.

ಶಿಕ್ಷಣ ಇಲಾಖೆ ಸುತ್ತೋಲೆ ಅನುಸಾರ 2025-26ನೇ ಸಾಲಿಗೆ ಶಾಲಾ ಆಡಳಿತ ಮಂಡಳಿಗಳು ಹೊಸ ಮಾನ್ಯತೆಗೆ ಅಥವಾ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜ.12ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯತೆ ಅಥವಾ ಮಾನ್ಯತೆ ನವೀಕರಣ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ನೀಡಲು ಫೆ.16ರವರೆಗೆ ಅವಕಾಶ ನೀಡಲಾಗಿದೆ. ಈ ಮೊದಲು ಕೂಡ ಕೆಲವು ಬಾರಿ ಇದೇ ರೀತಿ ದಿನಾಂಕ ವಿಸ್ತರಿಸಲಾಗಿತ್ತು. ಇಲಾಖೆಯ ಈ ವಿಳಂಬ ನೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ:

ಈಗಾಗಲೇ ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮಂಡಳಿ ವೇಳಾಪಟ್ಟಿ ಪ್ರಕಟಿಸಿದ್ದು, ಶಾಲೆಗಳು ತಮ್ಮ 10ನೇ ತರಗತಿ ಮಕ್ಕಳನ್ನು ಇಲಾಖೆಯ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(ಸ್ಯಾಟ್ಸ್‌) ತಂತ್ರಾಂಶದ ಮೂಲಕ ಪರೀಕ್ಷೆಗೆ ನೋಂದಾಯಿಸಲು ಹಲವು ಬಾರಿ ಅವಕಾಶ ನೀಡಿದೆ. ಆದರೆ, ಮಾನ್ಯತೆ/ನವೀಕರಣ ದೊರೆಯದ ಶಾಲೆಗಳು ಪರೀಕ್ಷೆಗೆ ಮಕ್ಕಳನ್ನು ನೋಂದಾಯಿಸಲು ಸಾಧ್ಯವಿಲ್ಲ. ಆ ಶಾಲೆಗಳ ಮಕ್ಕಳನ್ನು ಬೇರೆ ಶಾಲೆಗಳಿಂದ ನೋಂದಾಯಿಸಲು ಸಂಬಂಧಪಟ್ಟ ಶಾಲೆಗಳ ಮಾಹಿತಿ ನೀಡುವಂತೆ ಎಲ್ಲಾ ಜಿಲ್ಲಾ ಡಿಡಿಪಿಐಗಳಿಗೆ ಮಂಡಳಿ ಸೂಚಿಸಿದೆ.

ಇದಕ್ಕೆ, ಖಾಸಗಿ ಶಾಲಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ನವೀಕರಣ ವಿಚಾರವಾಗಿ ಹಳೆಯ ಶಾಲೆಗಳಿಗೂ ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ ಮಾನದಂಡಗಳನ್ನು ಪಾಲಿಸುವಂತೆ ಇಲಾಖೆ ಒತ್ತಡ ಹಾಕುತ್ತಿದ್ದು, ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಈ ವಿಚಾರ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿ ಇವುಗಳ ಪರಿಹಾರಕ್ಕೆ ಸದನ ಸಮಿತಿ ರಚಿಸಲಾಗಿದೆ. ಹೀಗಿದ್ದರೂ ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾ ಮಂಡಳಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿವೆ. ಇದರಿಂದ ಶಾಲಾ ಆಡಳಿತ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ಆತಂಕ ಎದುರಿಸುವಂತಾಗಿದೆ ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಅವರ್‌ ಸ್ಕೂಲ್‌ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಅರಸ್‌, ಕುಸ್ಮಾ ಸಂಘಟನೆಯ ಸತ್ಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈವರೆಗೆ 761 ಶಾಲೆಗೆ ಮಾತ್ರ ಮಾನ್ಯತೆ ಲಭ್ಯ:

ಇನ್ನು ‘ಕನ್ನಡಪ್ರಭ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಾನ್ಯತೆ ನವೀಕರಣಕ್ಕೆ ಇದುವರೆಗೆ 5,762 ಶಾಲೆಗಳು ಮಾತ್ರ ಅರ್ಜಿ ಸಲ್ಲಿಸಿದ್ದು, ಈ ಪೈಕಿ 761 ಶಾಲೆಗಳಿಗೆ ಮಾತ್ರ ನವೀಕರಣ ದೊರಕಿದೆ. 3,697 ಶಾಲೆಗಳ ಅರ್ಜಿ ಮಾನದಂಡಗಳನ್ನು ಪೂರೈಸದ ಕಾರಣಕ್ಕೆ ತಿರಸ್ಕಾರಗೊಂಡಿವೆ. ಉಳಿದ 1,304 ಶಾಲೆಗಳ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. 

ಮಾನ್ಯತೆ/ನವೀಕರಣ ಹಲವು ವರ್ಷಗಳ ಮುಗಿಯದ ರಗಳೆ:

ಖಾಸಗಿ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿ ಹೊಸ ಮಾನ್ಯತೆ ನೀಡುವ ಅಥವಾ ನವೀಕರಣ ಮಾಡುವ ಪ್ರಕ್ರಿಯೆಯನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಣ ಇಲಾಖೆ ಆರಂಭಿಸುತ್ತದೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯಧೋರಣೆಯಿಂದ ಪರೀಕ್ಷೆಗಳು ಹತ್ತಿರವಾಗುವವರೆಗೂ ಪೂರ್ಣಗೊಳಿಸುವುದೇ ಇಲ್ಲ. ಈ ನಿಧಾನಗತಿ ಸಾಕಷ್ಟು ಭ್ರಷ್ಟಾಚಾರಕ್ಕೂ ದಾರಿಯಾಗಿದೆ ಎಂಬ ಆರೋಪಗಳು ಖಾಸಗಿ ಶಾಲೆಗಳದ್ದು. ಆದರೆ, ಅಧಿಕಾರಿಗಳು ಹೇಳುವುದು ಶಾಲಾ ಆಡಳಿತ ಮಂಡಳಿಯವರು ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದೆ ತಮ್ಮ ಬೆಂಬಲಿಗ ಶಾಸಕರ ಮೂಲಕ ಸರ್ಕಾರದ ಮೇಲೆ, ಸಚಿವರ ಮೇಲೆ ಒತ್ತಡ ತಂದು ಕಾಲಾವಕಾಶ ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತವೆ. ಅಲ್ಲದೇ ಸುರಕ್ಷತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಪಾಲಿಸಬೇಕಾದ ನಿಯಮಗಳ ಗೊಂದಲವನ್ನು ಬಗೆಹರಿಸುವ ಕೆಲಸವೂ ಸರ್ಕಾರದ ಕಡೆಯಿಂದ ಆಗಬೇಕಿದೆ ಎಂದು ಹೇಳಿದ್ದಾರೆ.