ಬೆಂಗಳೂರು ಉತ್ತರ ತಾಲೂಕಿನ ಕೋಗಿಲು ಲೇಔಟ್ ಪ್ರದೇಶದಲ್ಲಿ ಬಡವರ ಮನೆಗಳನ್ನು ಧ್ವಂಸಗೊಳಿಸಿ ನೂರಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿಸಿರುವ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ನಗರದ ಅಕ್ತರ್ ರಜಾ ಸರ್ಕಲ್ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರು ಉತ್ತರ ತಾಲೂಕಿನ ಕೋಗಿಲು ಲೇಔಟ್ ಪ್ರದೇಶದಲ್ಲಿ ಬಡವರ ಮನೆಗಳನ್ನು ಧ್ವಂಸಗೊಳಿಸಿ ನೂರಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿಸಿರುವ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ನಗರದ ಅಕ್ತರ್ ರಜಾ ಸರ್ಕಲ್ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಎಸ್‌ಡಿಪಿಐ ದಾವಣಗೆರೆ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್ ಮಾತನಾಡಿ, ಬೆಂಗಳೂರು ಫಕೀರ್ ಕಾಲೋನಿ, ವಸೀಂ ಲೇಔಟ್ ಹಾಗೂ ಕೋಗಿಲು ಬಡಾವಣೆಯ ಬಡವರ ಮನೆಗಳ ಮೇಲೆ ಯಾವುದೇ ಪೂರ್ವ ಸೂಚನೆ ನೀಡದೆ ಬುಲ್ಡೋಜರ್ ಚಲಾಯಿಸಿರುವುದು ಸರ್ಕಾರದ ಬಡವರ ವಿರೋಧಿ ಹಾಗೂ ಅಮಾನವೀಯ ನೀತಿಯ ಜೀವಂತ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು.
ಇದು ಆಡಳಿತವಲ್ಲ, ಅಕ್ರಮ ದಾಳಿ. ಇದು ಕೇವಲ ಮಾನವೀಯ ವಿಫಲತೆ ಮಾತ್ರವಲ್ಲ, ಭಾರತದ ಸಂವಿಧಾನಕ್ಕೆ ಮಾಡಿದ ನೇರ ಅವಮಾನ ಎಂದು ತೀವ್ರವಾಗಿ ಟೀಕಿಸಿದರು.ದಾಖಲೆಗಳು, ಹಣ ಹಾಗೂ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಸಹ ಅವಕಾಶ ನೀಡಲಾಗಿಲ್ಲ. 30 ವರ್ಷಗಳಿಗೂ ಅಧಿಕ ಕಾಲ ಒಂದೇ ವಸಾಹತಿಯಲ್ಲಿ ಬದುಕು ಕಟ್ಟಿಕೊಂಡಿದ್ದ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ಪರಿಹಾರ, ಪುನರ್ವಸತಿ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ಕಠಿಣ ಚಳಿಗಾಲದ ರಾತ್ರಿಗಳನ್ನು ತೆರೆದ ಆಕಾಶದ ಕೆಳಗೆ ಕಳೆಯುವ ಸ್ಥಿತಿಗೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್ ಮಾತನಾಡುತ್ತಾ, ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿದ್ದ 53.5 ಎಕರೆ ಕೆಐಎಡಿಬಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ದುರುಪಯೋಗ ಮಾಡಿಕೊಂಡಿರುವ ಗಂಭೀರ ಅಕ್ರಮದ ಕುರಿತು ಸರ್ಕಾರ ಸಂಪೂರ್ಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಮೋಸಿನ್ ಮಾತನಾಡಿ, ಎಸ್‌ಡಿಪಿಐ ನಡೆಸಿದ ಹೋರಾಟ, ಪ್ರತಿಭಟನೆ ಹಾಗೂ ಜನಪರ ಒತ್ತಡದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಗಿಲು ಲೇಔಟ್ ಧ್ವಂಸದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದನ್ನು ಎಸ್‌ಡಿಪಿಐ ಸ್ವಾಗತಿಸುತ್ತದೆ. ಆದರೆ ಭರವಸೆಗಳ ಮೇಲೆ ಬದುಕು ಕಟ್ಟಲಾಗುವುದಿಲ್ಲ ಎಂದರು.
ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಯಹಿಯ, ಸೈಯದ್ ರೆಹಮಾನ್ ಸಾಬ್, ಫಯಾಜ್ ಬೇಗ್, ಜಬಿ ಆಝಾದ್ ನಗರ, ಎಸ್‌ಡಿಪಿಐ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಏಜಾಜ್ ಅಹಮದ್, ಹರಿಹರ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಮಿ ಮುಜವರ್, ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.