ಬೆಳ್ಳೂರು ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಜನರು ಮೊದಲಿನಿಂದಲೂ ನನಗೆ ರಾಜಕೀಯವಾಗಿ ಹೆಚ್ಚು ಶಕ್ತಿ ಕೊಟ್ಟು ನನ್ನ ಕೈಬಲಪಡಿಸಿಕೊಂಡು ಬಂದಿದ್ದಾರೆ. ಹಾಗಾಗಿ ಈ ಭಾಗದ ಜನರ ಋಣ ತೀರಿಸಲು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ ಮುಂದಿನ ಎರಡು ವರ್ಷದಲ್ಲಿ ಬೆಳ್ಳೂರು ಪಟ್ಟಣದಲ್ಲಿ ನಾಡಕಚೇರಿ, ಪಟ್ಟಣ ಪಂಚಾಯ್ತಿ ಕಟ್ಟಡ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಅಗತ್ಯ ವಹಿಸಲಾಗುವುದೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಬೆಳ್ಳೂರು ಪಟ್ಟಣ ಸೇರಿದಂತೆ, ಪ.ಪಂ. ವ್ಯಾಪ್ತಿಯ ಮಂತನಹಳ್ಳಿ, ನಾಗಲಾಪುರ ಗ್ರಾಮಗಳಲ್ಲಿ ಹೇಮಾವತಿ ಇಲಾಖೆಯ 7 ಕೋಟಿ ರು.ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬೆಳ್ಳೂರು ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಜನರು ಮೊದಲಿನಿಂದಲೂ ನನಗೆ ರಾಜಕೀಯವಾಗಿ ಹೆಚ್ಚು ಶಕ್ತಿ ಕೊಟ್ಟು ನನ್ನ ಕೈಬಲಪಡಿಸಿಕೊಂಡು ಬಂದಿದ್ದಾರೆ. ಹಾಗಾಗಿ ಈ ಭಾಗದ ಜನರ ಋಣ ತೀರಿಸಲು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದೇನೆ ಎಂದರು.

ಬೆಳ್ಳೂರು ಪಪಂ ವ್ಯಾಪ್ತಿಯ ಜನರಿಗಾಗಿ ಕುಡಿಯುವ ನೀರು ಪೂರೈಸಲು ೩೫ಕೋಟಿ ರು. ವೆಚ್ಚದ ಯೋಜನೆ ತರಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಇನ್ನುಳಿದಂತೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ನಾನು ಸಚಿವನಾಗಿ ಎರಡೂವರೆ ವರ್ಷದಲ್ಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಂದ ೨ಸಾವಿರ ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿಸಿರುವುದಾಗಿ ಹೇಳಿದರು.

ಈ ವೇ‍ಳೆ ವಿಧಾನಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಹೇಮಾವತಿ ಇಲಾಖೆ ಎಇಇ ಹರೀಶ್, ರಾಜೇಗೌಡ ಎಇ ರಾಜು, ನವೀನ್, ನಾಗಶ್ರೀ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಟಿ.ಕೃಷ್ಣಮೂರ್ತಿ, ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಮೂಡ್ಲೀಗೌಡ, ಪದ್ಮನಾಭ(ಪಾಪಣ್ಣ), ಮಹಮ್ಮದ್ ಯಾಸೀನ್, ಶಿವಣ್ಣ, ವೆಂಕಟೇಶ್ ಸೇರಿದಂತೆ ಹಲವರು ಇದ್ದರು.

ಅಕ್ಕ ಪಡೆ ಯೋಜನೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡಲು ಅಕ್ಕ ಪಡೆ ಯೋಜನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಮುಂಭಾಗದಲ್ಲಿ ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡು ಅಕ್ಕ ಪಡೆಯನ್ನು ರಚಿಸಲಾಗಿದೆ.

ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕಪಡೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮತ್ತು ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಅಕ್ಕ ಪಡೆ ಯೋಜನೆಯ ತಂಡದವರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದಲ್ಲಿರುವವರ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು ಸಹಾಯವಾಣಿಗಳು ಮತ್ತು ವರದಿ ಮಾಡುವ ಕಾರ್ಯ ವಿಧಾನಗಳಂತಹ ವಿಷಯಗಳ ಕುರಿತು ಶಾಲೆ, ಮಾರುಕಟ್ಟೆ ಮತ್ತು ನೆರೆಹೊರೆಗಳಲ್ಲಿ ಕಾನೂನು ಅರಿವು ಅಭಿಯಾನಗಳನ್ನು ನಡೆಸುವುದು.ಮತ್ತು ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪಿಸುವುದು ಸಂತ್ರಸ್ಥೆಯರಿಗೆ ಯಾವುದೇ ಭಯವಿಲ್ಲದೆ ಕಾನೂನು ಸಹಾಯ ಪಡೆಯಲು ಪ್ರೋತ್ಸಾಹಿಸುತ್ತದೆ. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್‌.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.