ಮಾರ್ಚ್‌ ೧ ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಜಿಲ್ಲಾಧಿಕಾರಿ ಮೀನಾ ನಾಗರಾಜ್

| Published : Feb 20 2025, 12:45 AM IST

ಮಾರ್ಚ್‌ ೧ ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಜಿಲ್ಲಾಧಿಕಾರಿ ಮೀನಾ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಮಾ.೧ ರಿಂದ ೨೦ರ ವರೆಗೆ ಜಿಲ್ಲೆಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೯೧೩೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.

ಮಾ.20ರ ವರೆಗೆ ನಡೆಯುವ ಎಕ್ಸಾಂ । 19 ಕೇಂದ್ರಗಳಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಾ.೧ ರಿಂದ ೨೦ರ ವರೆಗೆ ಜಿಲ್ಲೆಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೯೧೩೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.

ನಗರದ ಕೆಸ್ವಾನ್‌ನಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಲೋಪದೋಷ ಸಂಭವಿಸದಂತೆ ಕಟ್ಟುನಿಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದರು

ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ಪರೀಕ್ಷಾ ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರೀಕ್ಷಾ ಕಾರ್ಯನಿರ್ವಹಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷತೆ ಬೇಡ. ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕು, ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಮಾಡದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಆಯಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಫೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ ಎಂದರು.

ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಮೊಬೈಲ್ ಬಳಸುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ಪೋಷಕರಿಗೆ ಅವಕಾವಿಲ್ಲ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು:

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯಲು ತಹಸೀಲ್ದಾರ್, ಬಿಇಒ ಹಾಗೂ ಪ್ರಾಚಾರ್ಯರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪರೀಕ್ಷಾ ಕೇಂದ್ರದ ಸಂಕೇತಗಳನ್ನು ಸರಿಯಾಗಿ ಪರಿಶೀಲಿಸಿ ಜಿಪಿಎಸ್ ಆಳವಡಿಸಿದ ವಾಹನದಲ್ಲಿ ನಿಗದಿಪಡಿಸಿದ ಮಾರ್ಗ ಹಾಗೂ ಸಮಯನುಸಾರ ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಿಸಿ ಟಿವಿ ಕಣ್ಗಾವಲಿನಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪಡೆದು ಸರಿಯಾದ ಸಮಯಕ್ಕೆ ಪರೀಕ್ಷಾ ಮೇಲ್ವಿಚಾರಕರಿಗೆ ತಲುಪಿಸಬೇಕು ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ, ಜಿಲ್ಲಾ ಖಜಾನಾಧಿಕಾರಿ ಓಂಕಾರಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯ್ಕ, ಎಲ್ಲಾ ತಾಲೂಕುಗಳ ತಹಸೀಲ್ದಾರರು, ಬಿಇಒಗಳು, ಉಪನ್ಯಾಸಕರು ಹಾಜರಿದ್ದರು.