ಸಾರಾಂಶ
ಲಕ್ಷ್ಮೇಶ್ವರ:
ಶಿವಾಜಿಯು ಅಪ್ರತಿಮ ದೇಶಭಕ್ತನಾಗಿದ್ದನು. ಬಾಲ್ಯದಲ್ಲಿಯೇ ದೇಶಭಕ್ತಿಯ ಕಿಚ್ಚು ತನ್ನ ತಾಯಿಯಿಂದ ಬಳುವಳಿಯಾಗಿ ಸಿಕ್ಕಿತ್ತು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.ಲಕ್ಷ್ಮೇಶ್ವರ ತಾಲೂಕ ಛತ್ರಪತಿ ಶಿವಾಜಿ ಕ್ಷತ್ರೀಯ ಮರಾಠ ಸಂಘದ ಆಶ್ರಯದಲ್ಲಿ ಪಟ್ಟಣದ ಕೆಳಗಿನ ಕಾಮನಕಟ್ಟಿಯ ಹತ್ತಿರ ಮಂಗಳವಾರ ಸಂಜೆ ನಡೆದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಲ್ಲಿ ತಮ್ಮ ತಾಯಿಯ ದೇಶಭಕ್ತಿಯ ಹಾಗೂ ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಕಥೆಗಳನ್ನು ಕೇಳುತ್ತ ಬೆಳೆದ ಪರಿಣಾಮವಾಗಿ ದೇಶಭಕ್ತಿ ಅವರ ನರನಾಡಿಗಳಲ್ಲಿ ಉಕ್ಕಿ ಹರಿಯುತ್ತಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪರಕೀಯರ ಗುಲಾಮಗಿರಿಯಿಂದ ಮುಕ್ತಿ ಕೊಡಿಸುವ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದು ಇತಿಹಾಸದಿಂದ ತಿಳಿಯುತ್ತದೆ. ಶಿವಾಜಿ ಮಹಾರಾಜರ ದೇಶಭಕ್ತಿ ಹಾಗೂ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಹಾಗೂ ಜಿ.ಎಂ.ಮಹಾಂತಶೆಟ್ಟರ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಎಂದರೆ ದೇಶಪ್ರೇಮದ ಪ್ರತೀಕವಾಗಿ ಕಂಡು ಬರುತ್ತಾರೆ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವದ ಹಂಗು ತೊರೆದು ಹೋರಾಡಿದ್ದು ಸ್ಮರಣೀಯ, ಗದಗ ಜಿಲ್ಲೆಯ ಸೊರಟೂರ ಶಿವಾಜಿಯ ಪೂರ್ವಿಕರ ನೆಲೆವೀಡಾಗಿತ್ತು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಶಿವಾಜಿಯು ಮರಾಠ ಸಾಮ್ರಾಜ್ಯ ಕಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ಷಣಗಳನ್ನು ನೆನೆದರೆ ರೋಮಾಂಚನವಾಗುತ್ತದೆ. ಲಕ್ಷ್ಮೇಶ್ವರ ಪಟ್ಟಣ ಇತಿಹಾಸ ಪ್ರಸಿದ್ದ ಸೋಮನಾಥನು ಶಿವಾಜಿ ಮಹಾರಾಜರ ಮನೆ ದೇವರಾಗಿದ್ದರು ಎಂಬುದು ಕೂಡಾ ಅಚ್ಚರಿಯ ಸಂಗತಿಯಾಗಿದೆ. ಹೊಳಲಮ್ಮ ದೇವಿ ಕೋಟೆಯನ್ನು ಕಟ್ಟಿ ಮುಸ್ಲಿಂ ದೊರೆಗಳ ವಿರುದ್ದ ಹೋರಾಟ ಮಾಡಿದ್ದು ಸ್ಮರಣೀಯ. ಗದಗ ಜಿಲ್ಲೆಯೊಂದಿಗೆ ಶಿವಾಜಿ ಮಹಾರಾಜರು ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಹೇಳಿದರು.
ಈ ವೇಳೆ ಗಂಗಾವತಿಯ ಶ್ರೀಕಾಂತ ಹೊಸಕೇರಿ ಉಪನ್ಯಾಸ ನೀಡಿದರು. ಸಭೆಯಲ್ಲಿ ಪುರಸಭೆಯ ಅಧ್ಯಕ್ಷೆ ಯಲ್ಲಪ್ಪ ದುರಗಣ್ಣವರ, ಶಂಕ್ರಪ್ಪ ಬೊಮ್ಮನಹಳ್ಳಿ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಹತ್ತಿಕಾಳ, ಬಸವೇಶ ಮಹಾಂತಶೆಟ್ಟರ, ಈಶ್ವರ ಗದಗ, ಮಂಜುನಾಥ ಗದಗ ಇದ್ದರು.ಸಮಾರಂಭದಲ್ಲಿ ವಿವಿಧ ವಿಭಾಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ರಾಮಕೃಷ್ಣ ಗದಗ ಹಾಗೂ ರತ್ನಾ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.