ವಸುಂಧರೆಯ ಅಂದ ಹೆಚ್ಚಿಸಿದ ಈರುಳ್ಳಿ ಹೂ

| Published : Feb 20 2025, 12:45 AM IST

ಸಾರಾಂಶ

ಗಣಿ ನಾಡು ಸಂಡೂರು ತಾಲೂಕಿನ ವಿವಿಧೆಡೆ ಹಿಂಗಾರಿನಲ್ಲಿ ಬೀಜೋತ್ಪಾದನೆಗಾಗಿ ಬೆಳೆದ ಈರುಳ್ಳಿ ಬೆಳೆಯಲ್ಲಿ ಅರಳಿದ ಹೂಗಳು ವಸುಂಧರೆಯ ಅಂದ ಹೆಚ್ಚಿಸಿವೆ.

ಬೀಜೋತ್ಪಾದನೆಗಾಗಿ ಬೆಳೆದ ಈರುಳ್ಳಿ ಬೆಳೆಯಲ್ಲಿ ಅರಳಿದ ಹೂಗಳುವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಗಣಿ ನಾಡು ಸಂಡೂರು ತಾಲೂಕಿನ ವಿವಿಧೆಡೆ ಹಿಂಗಾರಿನಲ್ಲಿ ಬೀಜೋತ್ಪಾದನೆಗಾಗಿ ಬೆಳೆದ ಈರುಳ್ಳಿ ಬೆಳೆಯಲ್ಲಿ ಅರಳಿದ ಹೂಗಳು ವಸುಂಧರೆಯ ಅಂದ ಹೆಚ್ಚಿಸಿವೆ.

ಹಿಂಗಾರಿನಲ್ಲಿ ತಾಲೂಕಿನ ವಿವಿಧೆಡೆ ನೀರಾವರಿ ವ್ಯವಸ್ಥೆಯುಳ್ಳ ರೈತರು ಹೆಚ್ಚಾಗಿ ಬೆಳೆಯುವುದು ಸ್ಥಳೀಯ ತಳಿಯ ಈರುಳ್ಳಿಯನ್ನು. ಗಾತ್ರ ಸ್ವಲ್ಪ ಚಿಕ್ಕದಾದರೂ, ಇಲ್ಲಿ ಬೆಳೆಯುವ ಈರುಳ್ಳಿ ರುಚಿಗೆ ಹೆಸರುವಾಸಿ. ಈರುಳ್ಳಿ ಬೆಳೆಯುವ ಹಲವು ರೈತರು ತಮ್ಮ ಹೊಲಗಳಲ್ಲಿ ಈರುಳ್ಳಿಯ ಜೊತೆಗೆ ಹಳೆಯ ಈರುಳ್ಳಿ ಗಡ್ಡೆಗಳನ್ನು ನಾಟಿ ಮಾಡಿ, ಈರುಳ್ಳಿ ಬೀಜೋತ್ಪಾದನೆ ಮಾಡಿಕೊಳ್ಳುತ್ತಾರೆ. ಆ ಬೀಜಗಳನ್ನೇ ಮುಂದಿನ ವರ್ಷದಲ್ಲಿ ಈರುಳ್ಳಿ ಬೆಳೆಯಲು ಉಪಯೋಗಿಸಿಕೊಳ್ಳುತ್ತಾರೆ. ಕೆಲವರು ಸೇರು ಲೆಕ್ಕದಲ್ಲಿ ಬೀಜ ಖರೀದಿಸಿ, ಅವುಗಳನ್ನು ಮಡಿಗಳಲ್ಲಿ ಹಾಕಿ, ಸಸಿ ಮಾಡಿಕೊಂಡು ನಾಟಿ ಮಾಡಿ ಈರುಳ್ಳಿ ಬೆಳೆದುಕೊಳ್ಳುತ್ತಾರೆ.೨ ಎಕರೆ ಜಮೀನಿನಲ್ಲಿ ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯುತ್ತೇನೆ. ಹಿಂಗಾರಿನಲ್ಲಿ ಹನಿ ನೀರಾವರಿ ವ್ಯವಸ್ಥೆಯೊಂದಿಗೆ ನಾನು ಸುಮಾರು ೧೫ ವರ್ಷಗಳಿಂದ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದ್ದೇನೆ. ಸ್ಥಳೀಯವಾಗಿ ಬೆಳೆಯುವ ಈರುಳ್ಳಿಯ ಹಳೆಯ ಗಡ್ಡೆಗಳನ್ನು ಖರೀದಿಸಿ, ಅವುಗಳನ್ನು ನಾಟಿ ಮಾಡಿ, ಬೀಜೋತ್ಪಾದನೆ ಮಾಡುತ್ತೇವೆ. ಆಂಧ್ರಪ್ರದೇಶದ ವರ್ತಕರೊಬ್ಬರು ಪ್ರತಿವರ್ಷ ತಾವೇ ಈರುಳ್ಳಿ ಬೀಜದ ಗಡ್ಡೆಗಳನ್ನು ನೀಡುತ್ತಾರೆ. ನಾವು ಅವುಗಳಿಂದ ಬೀಜೋತ್ಪಾದನೆ ಮಾಡಿ, ಅವರಿಗೆ ಮಾರುತ್ತೇವೆ ಎನ್ನುತ್ತಾರೆ ಹಲವು ವರ್ಷಗಳಿಂದ ತಮ್ಮ ಹೊಲದಲ್ಲಿ ಈರುಳ್ಳಿ ಬೀಜೋತ್ಪಾದನೆ ನಡೆಸಿ ಮಾರಾಟ ಮಾಡುತ್ತಿರುವ ತಾಲೂಕಿನ ಕೃಷ್ಣಾನಗರದ ರೈತ ಮೇಟಿ ನಿಂಗಪ್ಪ.

ಬೀಜದ ಗಡ್ಡೆಗಳನ್ನು ನಾಟಿ ಮಾಡಿ ನಾಲ್ಕುವರೆ ತಿಂಗಳಿಗೆ ಈರುಳ್ಳಿ ಬೆಳೆ ಕಟಾವಿಗೆ ಬರುತ್ತದೆ. ಈ ವರ್ಷ ನಾಟಿ ಮಾಡಿ ಎರಡುವರೆ ತಿಂಗಳಾಗಿದೆ. ಬೆಳೆ ಚೆನ್ನಾಗಿ ಬಂದಿದೆ. ಎರಡು ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆಗಾಗಿ ಈಗಾಗಲೆ ₹೨.೧೦ ಲಕ್ಷ ಖರ್ಚಾಗಿದೆ. ಈರುಳ್ಳಿ ಬೆಳೆಯಲು ನೀರಾವರಿ ವ್ಯವಸ್ಥೆಯೊಂದಿಗೆ ಬಿಸಿಲಿರಬೇಕು. ವಾತಾವರಣ ಸಹಕರಿಸಿದರೆ, ಉತ್ತಮ ಫಲ ಹಾಗೂ ಲಾಭವನ್ನು ಗಳಿಸಬಹುದು. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇನೆ. ಪ್ರಕೃತಿ ಮತ್ತು ಮಾರುಕಟ್ಟೆ ಸಹಕರಿಸಬೇಕು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಈ ವರ್ಷ ಸೇರು ಈರುಳ್ಳಿ ಬೀಜ ₹೧೦೦೦ದಿಂದ ೨೦೦೦ದವರೆಗೆ ಮಾರಾಟವಾಗಿದೆ. ಹೊಸ ಗಡ್ಡೆಗಿಂತ ಹಳೆ ಗಡ್ಡೆಯನ್ನು ನಾಟಿ ಮಾಡಿದರೆ, ಉತ್ತಮ ಇಳುವರಿ ಬರಲಿದೆ. ಹಳೆ ಗಡ್ಡೆಗೆ ಹೊಸ ಗಡ್ಡೆಗಿಂತ ₹೫೦೦ ಜಾಸ್ತಿ ಇರುತ್ತದೆ. ಹಲವು ರೈತರು ಈರುಳ್ಳಿ ಗಡ್ಡೆಯನ್ನು ನಾಟಿ ಮಾಡಿ, ಬೀಜೋತ್ಪಾದನೆ ಮಾಡಿಕೊಳ್ಳುತ್ತಾರೆ. ಕೆಲವರು ಸೇರಿನ ಲೆಕ್ಕದಲ್ಲಿ ಕೊಂಡುಕೊಂಡು ಈರುಳ್ಳಿ ಬೆಳೆಯುತ್ತಾರೆ ಎಂದು ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹಾಗೂ ಈರುಳ್ಳಿ ಬೆಳೆಗಾರ ಭುಜಂಗನಗರದ ರೈತ ಚಂದ್ರಶೇಖರ ಮೇಟಿ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ವಿವಿಧೆಡೆ ರೈತರು ತಮ್ಮ ಹೊಲಗಳಲ್ಲಿ ಈರುಳ್ಳಿ ಬೆಳೆಯ ಜೊತೆಗೆ ಬೀಜೋತ್ಪಾದನೆಗಾಗಿ ಬೆಳೆದ ಈರುಳ್ಳಿ ಬೆಳೆಯಲ್ಲಿ ಅರಳಿರುವ ಹೂಗಳು ಭೂಮಿ ತಾಯಿಯ ಅಂದವನ್ನು ಹೆಚ್ಚಿಸಿರುವುದಲ್ಲದೆ, ನೋಡುಗರ ಕಣ್ಮನ ಸೆಳೆಯುತ್ತಿವೆ.