ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಬಂಗಾರದ ಆಭರಣ (ನಿಧಿ) ಸಿಕ್ಕ ಬೆನ್ನಲ್ಲೇ ಉತ್ಖನನ ನಡೆಯುತ್ತಿರುವುದು ಕಾಕತಾಳೀಯವಾದರೂ ಸರ್ಕಾರವು ಪೂರ್ವ ನಿಗದಿತ ಯೋಜನೆಯಂತೆ ಶೋಧ ಕಾರ್ಯ ಕೈಗೊಂಡಿದೆ.
ಗದಗ: ಕಲ್ಯಾಣಿ ಚಾಲುಕ್ಯರ ಕಲಾ ವೈಭವದ ತವರೂರು, ದೇವಸ್ಥಾನಗಳ ಸ್ವರ್ಗ ಎಂದೇ ಖ್ಯಾತಿಯಾದ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶುಕ್ರವಾರ ಪುರಾತತ್ವ ಇಲಾಖೆಯ ಮಹತ್ವದ ಉತ್ಖನನ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಖನನ ಪ್ರಕ್ರಿಯೆಗೆ ಚಾಲನೆ ನೀಡಿದರು.
ಲಕ್ಕುಂಡಿಯ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಉತ್ಖನನಕ್ಕೆ ಬಳಸುವ ಗಾರೆ, ಪಿಕಾಸಿ, ಬುಟ್ಟಿ ಹಾಗೂ ದಾರ ಸೇರಿದಂತೆ ವಿವಿಧ ಪರಿಕರಗಳಿಗೆ ಕುಂಕುಮ, ವಿಭೂತಿ ಹಚ್ಚಿ, ಹೂವು ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 11ಕ್ಕೆ ಸರಿಯಾಗಿ ಜಿಲ್ಲಾಧಿಕಾರಿಗಳು ಉತ್ಖನನ ಕಾರ್ಯವನ್ನು ಆರಂಭಿಸಿದರು.ಕುರುಹುಗಳ ಶೋಧ: ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಬಂಗಾರದ ಆಭರಣ (ನಿಧಿ) ಸಿಕ್ಕ ಬೆನ್ನಲ್ಲೇ ಉತ್ಖನನ ನಡೆಯುತ್ತಿರುವುದು ಕಾಕತಾಳೀಯವಾದರೂ ಸರ್ಕಾರವು ಪೂರ್ವ ನಿಗದಿತ ಯೋಜನೆಯಂತೆ ಶೋಧ ಕಾರ್ಯ ಕೈಗೊಂಡಿದೆ. ನಿಧಿ ಸಿಕ್ಕ ಜಾಗದಿಂದ ಸುಮಾರು 250 ಮೀಟರ್ ಅಂತರದಲ್ಲಿ ಶೋಧ ನಡೆಯುತ್ತಿರುವುದು ವಿಶೇಷವಾಗಿದೆ.
ವೈಜ್ಞಾನಿಕ ಕಾರ್ಯಾಚರಣೆ: ಪುರಾತತ್ವ ಇಲಾಖೆಯ ಅಧಿಕಾರಿಗಳು ಉತ್ಖನನದಲ್ಲಿ ತೊಡಗಿರುವ ಸುಮಾರು 50 ಮಂದಿ ಕಾರ್ಮಿಕರಿಗೆ ವಿಶೇಷ ತರಬೇತಿ ನೀಡಿದ್ದು, ಪ್ರಾಚೀನ ವಸ್ತುಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಅತ್ಯಂತ ನಾಜೂಕಿನಿಂದ ಮಣ್ಣು ತೆಗೆಯುವ ಬಗ್ಗೆ ಅಗತ್ಯ ತರಬೇತಿ ನೀಡಿದ್ದಾರೆ.ತಜ್ಞರ ಅಭಿಮತ: ಇತಿಹಾಸತಜ್ಞ ಅಬ್ದುಲ್ ಕಟ್ಟಿಮನಿ ಮಾತನಾಡಿ, ಲಕ್ಕುಂಡಿಯ ಐತಿಹಾಸಿಕ ಮಹತ್ವ ಬಿಚ್ಚಿಟ್ಟರು. ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ. ರಾಮನು ಕಿಷ್ಕಿಂಧೆಗೆ ಹೋಗುವ ಮುನ್ನ ಇಲ್ಲಿಗೆ ಭೇಟಿ ನೀಡಿದ್ದ ಎನ್ನಲಾಗುತ್ತದೆ. ಇದು ಚಾಲುಕ್ಯರು, ಹೊಯ್ಸಳರು, ಕಲಚೂರಿಗಳ ಆಳ್ವಿಕೆಯ ನಾಡು. ಇಲ್ಲಿ 101 ಬಾವಿ ಹಾಗೂ 101 ದೇವಸ್ಥಾನಗಳಿದ್ದವು ಎಂಬ ಐತಿಹ್ಯವಿದೆ. ಲಕ್ಕುಂಡಿಯ ನಿಜವಾದ ಇತಿಹಾಸ ಜಗತ್ತಿಗೆ ತಿಳಿಯಬೇಕಾದರೆ ಕನಿಷ್ಠ 50 ಮಂದಿರಗಳ ಉತ್ಖನನವಾಗಬೇಕು ಎಂದರು.ಉತ್ಖನನ ಕಾರ್ಯ: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಕ್ರಿಯ ಸಹಯೋಗದೊಂದಿಗೆ ಉತ್ಖನನ ನಡೆಯುತ್ತಿದೆ. ನುರಿತ ತಜ್ಞರು ಮತ್ತು ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ಉತ್ಖನನ ಕಾರ್ಯ ಕೈಗೊಳ್ಳಲಾಗಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ತಿಳಿಸಿದರು.ಮುಂದಿನ ನಿರ್ಧಾರ: ಭೂಮಿಯ ಒಡಲಿನಲ್ಲಿ ಏನಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನದ ಕುರುಹುಗಳಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಗ್ರಾಮ ಸ್ಥಳಾಂತರದ ಯಾವುದೇ ಪ್ರಸ್ತಾಪವಿಲ್ಲ. ಒಂದು ವೇಳೆ ಉತ್ಖನನದಲ್ಲಿ ಅಂತಹ ಮಹತ್ವದ ಅವಶೇಷಗಳು ಪತ್ತೆಯಾದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
ಅಪರೂಪದ ಸಂಸ್ಕೃತಿ: ಉತ್ಖನನ ಕಾರ್ಯದಿಂದಾಗಿ ಲಕ್ಕುಂಡಿಯಲ್ಲಿ ಹುದುಗಿರುವ ಎಲ್ಲ ಇತಿಹಾಸ ಮತ್ತು ಅಪರೂಪದ ಸಂಸ್ಕೃತಿ ಆಚೆ ಬರಲಿದೆ. ಈಗಾಗಲೇ ಬಂಗಾರದ ಆಭರಣಗಳು ದೊರೆತ ಹಿನ್ನೆಲೆ ಉತ್ಖನನಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದರು.ಮೊದಲ ದಿನ ಪತ್ತೆಯಾಗದ ಅವಶೇಷ
ಗದಗ: ತಾಲೂಕಿನ ಲಕ್ಕುಂಡಿಯ ಐತಿಹಾಸಿಕ ಹಿನ್ನೆಲೆಯುಳ್ಳ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಶುಕ್ರವಾರ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭಗೊಂಡಿದ್ದು, ಮೊದಲ ದಿನದ ಕಾರ್ಯಾಚರಣೆಯ ಅಂತ್ಯಕ್ಕೆ ಯಾವುದೇ ಮಹತ್ವದ ಅವಶೇಷಗಳು ಲಭ್ಯವಾಗಿಲ್ಲ.ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸುಮಾರು 10x10 ಅಡಿ ಸುತ್ತಳತೆಯಲ್ಲಿ ಗುರುತು ಮಾಡಲಾಗಿದ್ದು, ಬೆಳಗ್ಗೆ 11 ಗಂಟೆಯಿಂದ ಕಾರ್ಮಿಕರು ಮಣ್ಣು ಅಗೆಯುವ ಕೆಲಸ ಪ್ರಾರಂಭಿಸಿದರು. ಸಂಜೆ 5.30ರ ವೇಳೆಗೆ ಮೊದಲ ದಿನದ ಕೆಲಸವನ್ನು ಸ್ಥಗಿತಗೊಳಿಸಲಾಯಿತು. ಮೊದಲ ಹಂತದಲ್ಲಿ ಕೇವಲ 1 ಅಡಿ ಆಳದವರೆಗೆ ಮಾತ್ರ ಮಣ್ಣನ್ನು ತೆಗೆಯಲಾಗಿದ್ದು, ಯಾವುದೇ ಪುರಾತತ್ವ ವಸ್ತುಗಳು ಕಂಡುಬಂದಿಲ್ಲ.ಈ ಜಾಗದಲ್ಲಿ ಸುಮಾರು 7ರಿಂದ 8 ಅಡಿ ಆಳದವರೆಗೆ ಅಗೆದರೆ ಐತಿಹಾಸಿಕ ಅವಶೇಷಗಳು ಅಥವಾ ಪ್ರಾಚೀನ ಕಾಲದ ನಿಧಿ ಸಿಗಬಹುದು ಎಂಬ ನಿರೀಕ್ಷೆ ಸ್ಥಳೀಯರಲ್ಲಿ ಮತ್ತು ಇಲಾಖೆಯಲ್ಲಿ ಮನೆಮಾಡಿದೆ. ಹೀಗಾಗಿ ಮುಂದಿನ ಎರಡು-ಮೂರು ದಿನಗಳ ಕಾಲ ಈ ಪ್ರಕ್ರಿಯೆಯು ಬಹಳ ಕುತೂಹಲಕಾರಿಯಾಗಿರಲಿದೆ ಎನ್ನುತ್ತಾರೆ ಸ್ಥಳೀಯರು.ಆಯುಕ್ತರ ಹೇಳಿಕೆ: ಈ ಕುರಿತು ಮಾಹಿತಿ ನೀಡಿರುವ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಅವರು, ಸದ್ಯಕ್ಕೆ ಮೇಲ್ಪದರದ ಮಣ್ಣನ್ನು ತೆಗೆಯಲಾಗಿದೆ. ಭೂಮಿಯ ನೈಜ ಮಣ್ಣು ಸಿಗುವವರೆಗೆ ಉತ್ಖನನ ಮುಂದುವರಿಯಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ಇಲ್ಲಿ ಏನಿದೆ ಎಂಬುದು ಸ್ಪಷ್ಟವಾಗಲಿದೆ.
