ಉತ್ತರ ಕನ್ನಡ ಜಿಲ್ಲೆಯಲ್ಲಿ ತಳಮಟ್ಟದಿಂದ ಯೋಜನೆಗಳನ್ನು ರೂಪಿಸುವ ಕುರಿತು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಕಾರವಾರ: ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಯೋಜನೆಗಳನ್ನು ರೂಪಿಸುವಾಗ ಸಾರ್ವಜನಿಕರ ಅಪೇಕ್ಷೆಗಳನ್ನು ಸೇರ್ಪಡೆಗೊಳಿಸಿ, ಸಮಗ್ರ ಯೋಜನೆ ಸಿದ್ಧಪಡಿಸುವಂತೆ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ತಿಳಿಸಿದರು.

ಅವರು ಶುಕ್ರವಾರ ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಳಮಟ್ಟದಿಂದ ಯೋಜನೆಗಳನ್ನು ರೂಪಿಸುವ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕೇಂದ್ರೀಕರಣ ವ್ಯವಸ್ಥೆಯಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾನೂನು ತಮಗೆ ನೀಡಿರುವ ಅಧಿಕಾರ ಚಲಾಯಿಸಿ, ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿ, ಜನೋಪಯೋಗಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಬೇಕು ಎಂದರು.

ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮತ್ತು ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಜನರ ಅಪೇಕ್ಷೆಗಳು ಬಜೆಟ್‌ನಲ್ಲಿ ಪ್ರತಿಫಲಿಸಬೇಕು. ಕಾನೂನು ತಮಗೆ ನೀಡಿರುವ ಅಧಿಕಾರವನ್ನು ಮೊಟಕುಗೊಳಿಸದೆ ಅದರ ಸದುಪಯೋಗ ಆಗಬೇಕು. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನವಾಗುವಂತೆ ಯೋಜನೆ ರೂಪಿಸಿ, ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ರೂಪಿಸಬೇಕು ಎಂದರು.

ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಜನಸಂಖ್ಯೆ ಕಡಿಮೆ ಇದ್ದು, ವಿಸ್ತೀರ್ಣ ಅಧಿಕವಾಗಿದೆ. ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ನೀಡುವಾಗ ಇದನ್ನು ಪರಿಗಣಿಸಬೇಕು. ಜಿಲ್ಲೆಯು ಶೇ. 80ರಷ್ಟು ತೋಟಗಾರಿಕಾ ಬೆಳೆಯನ್ನು ಅವಲಂಬಿಸಿದ್ದು, ಅಡಕೆ ಬೆಳೆಗೆ ತಗಲುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸೂಕ್ತ ಔಷಧಿ ಕಂಡು ಹಿಡಿಯಬೇಕು. ಕಾಲುಸಂಕ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಯೋಜನೆ ರೂಪಿಸುವಾಗ ದೂರದೃಷ್ಟಿ ಇರಬೇಕು. ಆದ್ಯತಾ ಕಾರ್ಯಗಳಿಗೆ ಹೆಚ್ಚಿನ ಅನುದಾನ ವೆಚ್ಚ ಮಾಡಬೇಕು. ಪ್ರತಿಯೊಂದು ಇಲಾಖೆಗೂ ಜವಾಬ್ದಾರಿ ನಕ್ಷೆ ಆಗಬೇಕು. ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜನಸಂಪರ್ಕ ಉತ್ತಮವಾಗಿರಬೇಕು ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಯೋಜನೆಗಳನ್ನು ರೂಪಿಸುವಾಗ ಸಂಪನ್ಮೂಲಗಳನ್ನು ಗುರುತಿಸಬೇಕು, ತಳಮಟ್ಟದಿಂದ ಸಮಸ್ಯೆಗಳನ್ನು ಅರಿತು ದೂರದೃಷ್ಟಿ ಯೋಜನೆ ರೂಪಿಸಬೇಕು. ಸುಸ್ತಿರ ಅಭಿವೃದ್ಧಿ ಗುರಿ ಇರಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜಿಸಿ ಯೋಜನೆ ರೂಪಿಸಬಹುದಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಡಾ. ದಿಲೀಷ್ ಶಶಿ, ಶಿರಸಿ ಉಪ ವಿಭಾಗಾಧಿಕಾರಿ ಶಂಕರ್ ಗೌಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹಿರ್ ಅಬ್ಬಾಸ್, ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಎಂ.ಕೆ. ಭಟ್ ಮತ್ತಿತರರು ಇದ್ದರು.

ಜಿಲ್ಲೆಯ ಗ್ರಾಪಂ, ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಪ್ರಸ್ತುತ 2026-27ನೇ ಸಾಲಿನ ಜಿಪಂ ವಾರ್ಷಿಕ ಕರಡು ಯೋಜನೆಯಲ್ಲಿ ₹7,107.84 ಕೋಟಿ, ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳಲ್ಲಿ ₹3,671.43 ಕೋಟಿ ಸೇರಿದಂತೆ ಜಿಲ್ಲಾ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಒಟ್ಟು ₹13,811.19 ಕೋಟಿಗಳ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ.