ಬಳ್ಳಾರಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಕ್ಷದ ವರಿಷ್ಠರು ‘ಸೃಜನ್ ಸಂಘಟನಾ ಅಭಿಯಾನ- 2’ಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಸೇರಿದಂತೆ ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಹಾಗೂ ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸೃಜನ್ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕೈಗೊಂಡಿದ್ದ ಪಕ್ಷದ ವರಿಷ್ಠರು, ಎರಡನೇ ಹಂತದಲ್ಲಿ ಸಂಘಟನೆಯನ್ನು ತಳಮಟ್ಟದಿಂದ ಪುನರ್‌ರಚಿಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಜಿಲ್ಲಾ ಅಧ್ಯಕ್ಷರ ನೇಮಕದ ಜತೆಗೆ 16 ಜನ ಪದಾಧಿಕಾರಿಗಳು ಹಾಗೂ 15 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಘಟಕದಂತೆ ಬ್ಲಾಕ್ ಕಾಂಗ್ರೆಸ್ ಹಾಗೂ ವಿವಿಧ ಮುಂಚೂಣಿ ಘಟಕಗಳಿಗೂ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿರುವವರಿಗೆ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಮೂರ್ನಾಲ್ಕು ದಿನಗಳಲ್ಲಿ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪ್ರಕ್ರಿಯೆ ನಡೆಯಲಿದೆ. ಪಕ್ಷದ ಶಿಸ್ತು, ಸಂಘಟನಾ ಸಾಮರ್ಥ್ಯ, ಕಾರ್ಯಕರ್ತರೊಂದಿಗಿನ ಒಡನಾಟ ಹಾಗೂ ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅರ್ಹರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಪಕ್ಷದಲ್ಲಿ ಜವಾಬ್ದಾರಿ ಪಡೆಯಲು ಬಯಸುವವರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು. ಕೇವಲ ಹುದ್ದೆ ಪಡೆಯುವುದಕ್ಕಿಂತ ಪಕ್ಷವನ್ನು ಬಲಪಡಿಸುವ ಮನೋಭಾವ ಹೊಂದಿರುವುದು ಮುಖ್ಯ. ಪಕ್ಷದ ಸಿದ್ಧಾಂತ ಮತ್ತು ನಾಯಕತ್ವದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಭದ್ರ ಬುನಾದಿಯಿದ್ದು, ಅದನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದವರೆಗೆ ಪಕ್ಷದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದು, ಹೊಸ ಕಾರ್ಯಕರ್ತರನ್ನು ಸಂಘಟನೆಗೆ ಸೇರ್ಪಡೆಗೊಳಿಸುವುದು ಹಾಗೂ ಯುವಜನರು ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಪಕ್ಷದ ಸಂಘಟನಾ ಚಟುವಟಿಕೆಗಳ ಪ್ರಮುಖ ಭಾಗವಾಗಿದೆ ಎಂದರು.


ಜಿಲ್ಲಾ ಕಾಂಗ್ರೆಸ್ ಸಮಿತಿಯ ಜತೆಗೆ ಬ್ಲಾಕ್ ಕಾಂಗ್ರೆಸ್ ಘಟಕಗಳು ಹಾಗೂ ಮುಂಚೂಣಿ ಸಂಘಟನೆಗಳಲ್ಲಿಯೂ ಹೊಸ ಪದಾಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಸಂಘಟನೆಯಲ್ಲಿ ಬ್ಲಾಕ್ ಘಟಕಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಜವಾಬ್ದಾರಿ ಅವುಗಳ ಮೇಲಿದೆ. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲು ಹೊಸ ತಂಡಗಳ ರಚನೆ ಅಗತ್ಯವಾಗಿದೆ. ಪಕ್ಷದ ಕಾರ್ಯಕ್ರಮಗಳು ಹಾಗೂ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ರಾಜಶೇಖರ್, ಮೇಯರ್ ಪಿ. ಗಾದೆಪ್ಪ, ಎರಕುಲಸ್ವಾಮಿ, ವಿಷ್ಣು ಭೋಯಪಾಟಿ, ವೆಂಕಟೇಶ್ ಹೆಗಡೆ, ಪೆರ್ಲ ವಿವೇಕ್, ಶೋಭಾ ಕಾಳಿಂಗ, ಬಿ.ಎಂ. ಪಾಟೀಲ್, ವಿಲ್ಸನ್, ಪರ್ವಿನ್ ಬಾನು, ನಾಗಭೂಷಣಗೌಡ, ಅರುಣಾ ಜ್ಯೋತಿ ಮತ್ತಿತರರಿದ್ದರು.

ದೇಶ್ ಬಚಾವೋ ಬೃಹತ್ ಆಂದೋಲನ...

ನ. 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ದೇಶ್ ಬಚಾವೋ ಬೃಹತ್ ಆಂದೋಲನಕ್ಕೆ ಬಳ್ಳಾರಿಯಿಂದ 60 ಜನರು ನೋಂದಾಯಿಸಿಕೊಂಡಿದ್ದಾರೆ. ಹೋರಾಟಕ್ಕೆ ಎಷ್ಟು ಜನರಾದರೂ ಭಾಗವಹಿಸಬಹುದು. ಬರುವ ಕಾರ್ಯಕರ್ತರಿಗೆ ವಸತಿ, ಸಾರಿಗೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಡಬೇಕಾಗಿರುವುದರಿಂದ ಮೊದಲೇ ನೋಂದಾಯಿಸಿಕೊಳ್ಳಬೇಕು. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಂದೋಲನದಲ್ಲಿ ಭಾಗವಹಿಸುವರು ಎಂದು ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಹಾಗೂ ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಅವರು ತಿಳಿಸಿದರು.