ರಾಮಾಯಣದ ಸಾರವನ್ನು ನಾವು ಸಮಾಜಕ್ಕೆ ನೀಡಬೇಕಿದೆ. ಮನುಷ್ಯನ ಬದುಕಿನಲ್ಲಿ ತಪ್ಪು ಸಹಜ. ಆದರೆ ಅದನ್ನು ತಿದ್ದಿ ನಡೆಯಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿ ಅವರಿಂದ ಕಲಿಯಬೇಕು.

ಯಲ್ಲಾಪುರ: ವಾಲ್ಮೀಕಿ ಮಹರ್ಷಿಯ ಬದುಕಿನ ಪರಿವರ್ತನೆಯ ಹಾದಿಯನ್ನು ಇಂದಿನ ಸಮಾಜ ಅರಿಯಬೇಕಿದೆ. ವಾಲ್ಮೀಕಿ ಮಹರ್ಷಿಯನ್ನು ಯಾವುದೇ ಜಾತಿಯ ಹಿನ್ನೆಲೆಯಿಂದ ಕಾಣದೇ ಮಾನವತ್ವದ ನೆಲೆಯಿಂದ ಕಾಣಬೇಕಿದೆ ಎಂದು ಶಿಕ್ಷಕ ಶ್ರೀಧರ ಹೆಗಡೆ ಹೇಳಿದರು.

ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಬದಲಾವಣೆಗಳಿಗೆ ಅವಕಾಶ ನೀಡಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಬದುಕಿನ ಸಣ್ಣ ಬದಲಾವಣೆಗಳೇ ಬಹುದೊಡ್ಡ ಪ್ರೇರಣೆಯೂ ಆಗಬಲ್ಲದು. ಆದರ್ಶಗಳ ಪಾಲನೆ ಜತೆಗೆ ಅದನ್ನು ಜಗತ್ತಿಗೆ ಸಾರುವ ಕಾರ್ಯವಾಗಬೇಕು. ಸಮಾಜದಲ್ಲಿ ಜಾತಿಯತೆ, ಭ್ರಷ್ಟಾಚಾರವೆಂಬ ಹುತ್ತ ಆವರಿಸಿದೆ. ಅವುಗಳನ್ನು ಒಡೆದು ನಾವೆಲ್ಲ ಹೊರನಡೆಯಬೇಕಿದೆ. ರಾಮಾಯಣದ ಸಾರವನ್ನು ನಾವು ಸಮಾಜಕ್ಕೆ ನೀಡಬೇಕಿದೆ. ಮನುಷ್ಯನ ಬದುಕಿನಲ್ಲಿ ತಪ್ಪು ಸಹಜ. ಆದರೆ ಅದನ್ನು ತಿದ್ದಿ ನಡೆಯಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿ ಅವರಿಂದ ಕಲಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಹರ್ಡಲ್ಸ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಾನಿಯಾ ಸಿದ್ದಿ, ಪದವಿಪೂರ್ವ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವೀಣಾ ಸಿದ್ದಿ, ಮೀನಾಜ್ ಪಟೇಲ್, ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ನಾಗವೇಣಿ ಸಿದ್ದಿ, ಇಂಚರಾ ಸಿದ್ದಿ, ಅಶ್ವಿನಿ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.

ಗ್ರೇಡ್- ೨ ತಹಸೀಲ್ದಾರ್ ಗೀತಾ ಜಾಧವ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ವಾಲ್ಮೀಕಿ ಸಂಘದ ಸುರೇಶ ಕಟ್ಟಿಮನಿ, ಬೀಮ್ಸಿ ವಾಲ್ಮೀಕಿ, ಪಿಎಸ್ಐ ಸಿದ್ದಪ್ಪ ಗುಡಿ, ಬೆನಿತ್ ಸಿದ್ದಿ, ಜಗತರಾವ್ ರೇವಣಕರ್, ಗಣೇಶ ಪಾಠಣಕರ್, ಸಂತೋಷ ಪಾಠಣಕರ್ ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜ್ಯೋತಿ ನರೊಟ್ಟಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ ನಿರೂಪಿಸಿದರು.