ಚುನಾವಣೆಗಳಲ್ಲಿ ಜನಪರ ಹೋರಾಟಗಾರರ ಆಯ್ಕೆ ಮುಖ್ಯ

| Published : May 25 2024, 01:33 AM IST

ಸಾರಾಂಶ

ಬಡವರು, ನಿರುದ್ಯೋಗಿಗಳು, ಕಾರ್ಮಿಕರು, ನೌಕರರ ವರ್ಗಗಳನ್ನು ಯಾರು ಗೌರವಿಸುತ್ತಾರೋ, ಅವರ ಪರ ಹೋರಾಟ ಮಾಡುತ್ತಾರೆಯೋ ಅಂತಹವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಆಗ ಮಾತ್ರ ಈ ವರ್ಗಗಳಿಗೆ ನ್ಯಾಯ ದೊರಕುತ್ತದೆ ಎಂದು ವಿಧಾನ ಪರಿಷತ್ತು ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ವಿಪ ನೈರುತ್ಯ ಪದವೀಧರರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿಕೆ । ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಸಭೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಡವರು, ನಿರುದ್ಯೋಗಿಗಳು, ಕಾರ್ಮಿಕರು, ನೌಕರರ ವರ್ಗಗಳನ್ನು ಯಾರು ಗೌರವಿಸುತ್ತಾರೋ, ಅವರ ಪರ ಹೋರಾಟ ಮಾಡುತ್ತಾರೆಯೋ ಅಂತಹವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಆಗ ಮಾತ್ರ ಈ ವರ್ಗಗಳಿಗೆ ನ್ಯಾಯ ದೊರಕುತ್ತದೆ ಎಂದು ವಿಧಾನ ಪರಿಷತ್ತು ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.

ಶುಕ್ರವಾರ ಪಟ್ಟಣದ ಗುರು ಭವನದಲ್ಲಿ ವಿಧಾನ ಪರಿಷತ್ತು ಚುನಾವಣೆಯ ಕಾಂಗ್ರೆಸ್ ಪಕ್ಷದ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಯನೂರು ಮಂಜುನಾಥ್ ಪರ ಮತಯಾಚನೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಸುಮಾರು 30 ವಿಧಾನಸಭಾ ಕ್ಷೇತ್ರಗಳು, 5 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಸುಮಾರು 84.5 ಸಾವಿರ ಮತದಾರರಿದ್ದಾರೆ. ಅಭ್ಯರ್ಥಿಗಳು ಪ್ರತಿ ಮತದಾರರನ್ನೂ ಭೇಟಿಯಾಗಲು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಒಂದು ಕಡೆ ಸೇರಿಸಿ ಸಭೆ ಮೂಲಕ ಮತಯಾಚನೆ ಮಾಡಲಾಗುತ್ತಿದೆ ಎಂದು ಹೇಳಿದರು.

ತಮ್ಮ ರಾಜಕೀಯ ಜೀವಮಾನದಲ್ಲಿ ದುಡಿದು ತಿನ್ನುವ ಶ್ರಮಿಕ ವರ್ಗದವರ ಬಗ್ಗೆ ಗೌರವ ಇಟ್ಟುಕೊಂಡು ಅವರ ಹಿತರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಹೊರೆದು ಹೊಡೆದು ತಿನ್ನೋರನ್ನು ಸದಾ ವಿರೋಧಿಸತ್ತಲೇ ಬಂದಿದ್ದೇನೆ. ಒಂದು ಸಮಯದಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೆಂಗಳೂರಿನಲ್ಲಿ ಧರಣಿ ಮಾಡುತ್ತಿದ್ದ ಶಿಕ್ಷಕರನ್ನು ಕಂಡು ಅವರ ಸಮಸ್ಯೆಗಳನ್ನು ಆಲಿಸೋಣ ಬನ್ನಿ ಎಂದರೆ ಸ್ಥಳಕ್ಕೆ ಬಾರದ ಹಾಗೂ ಮೃತಪಟ್ಟ ಧರಣಿನಿರತರ ಬಗ್ಗೆ ಕಂಬನಿ ಮಿಡಿಯದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆ ನಾಯಿ ತೀರಿಕೊಂಡಾಗ ಅದಕ್ಕೆ ತೀವ್ರವಾಗಿ ಕಂಬನಿ ಮಿಡಿದು ಗೋಳಾಡಿದ್ದರು. ನಾಯಿಗೆ ಕೊಟ್ಟ ಪ್ರೀತಿ ಹೋರಾಟಗಾರಿಗೆ ಇಲ್ಲದಂತೆ ಮಾಡಿದರು ಎಂದು ಟೀಕಿಸಿದರು.

ಕಾರ್ಮಿಕರ ಕೆಲಸದ ಸಮಯ 12 ಗಂಟೆಯಿಂದ 8 ಗಂಟೆಗೆ ಇಳಿಸಬೇಕು. ಸಕ್ರೆಬೈಲ್‌ನಲ್ಲಿ ಆನೆ ಬಿಡಾರದಲ್ಲಿ ಆಪಾಯದ ಅರಿವಿಲ್ಲದೇ ಕೆಲಸ ಮಾಡುವ ಮಾವುತರ ವೇತನ ಹೆಚ್ಚಳ, ಪೊಲೀಸರ ಹಿತರಕ್ಷಣೆಗಾಗಿ ಹೀಗೆ ಹಲವಾರು ದಶಕಗಳಿಂದಲೂ ತಾನು ನೌಕರರು, ಕಾರ್ಮಿಕರು, ಬಡವರು, ಪದವೀಧರರ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಿದ್ದೇನೆ. ಈಗಾಗಲೇ 5 ರಿಂದ 6 ಮುಖ್ಯಮಂತ್ರಿಗಳ ಬಳಿ ಕೆಲಸ ಮಾಡಿದ ಅನುಭವವಿದೆ. ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತುಗಳಲ್ಲಿ ಕೆಲಸ ಮಾಡಿದ ಅನುಭವ ತನಗಿದೆ ಎಂದು ಹೇಳಿದರು.

ಈ ಬಾರಿಯ ನೈರುತ್ಯ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥ್ಯಿಯಾಗಿರುವ ತನಗೆ ಮತ ನೀಡಬೇಕು. ನೀವು ನೀಡಿದ ಮತದ ಋಣ ತೀರಿಸುವ ಕೆಲಸನ್ನು ಮುಂದಿನ ದಿನಗಳಲ್ಲಿ ಪ್ರಮಾಣಿಕವಾಗಿ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನೈರುತ್ಯ ಪದವೀಧರ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ ಕುಮಾರ್ ಜಾತಿ ರಾಜಕಾರಣ ಮಾಡದೇ ಕೇವಲ ನೀತಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ವಿಧಾನ ಪರಿಷತ್ತು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಎಲ್ಲ ಮುಖಂಡರು, ಕಾರ್ಯಕರ್ತರ ಮೇಲಿದೆ. ತಂಡಗಳನ್ನು ಮಾಡಿಕೊಂಡು ಪ್ರತಿಯೊಬ್ಬ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಳಮಟ್ಟದ ಹೋರಾಟಗಳಿಂದಲೇ ಗುರುತಿಸಿಕೊಂಡು ವಿವಿಧ ಹಂತಗಳ ಅಧಿಕಾರವನ್ನು ನಿಭಾಯಿಸಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಡಾ. ಕೆ.ಕೆ.ಮಂಜುನಾಥ ಕುಮಾರ್ ಅವರಿಗೆ ಹೆಚ್ಚಿನ ಮತಗಳ ಮೂಲಕ ಜಯಶೀಲರನ್ನಾಗಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಜಿಲ್ಲಾ ವೀಕ್ಷಕ ಷಣ್ಮಖ ಶಿವಳ್ಳಿ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕೆಪಿಸಿಸಿ ಸದಸ್ಯ ಡಾ.ಈಶ್ವರ ನಾಯ್ಕ, ಬಿ.ಸಿದ್ದಪ್ಪ, ಚಂದ್ರಶೇಖರಪ್ಪ, ಸಣ್ಣಕ್ಕಿ ಬಸವನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ, ನರಸಪ್ಪ, ಎಚ್.ಎ.ಗದ್ದಿಗೇಶ್, ಆರ್.ನಾಗಪ್ಪ ಮುಂತಾದವರು ಮಾತನಾಡಿದರು.

ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪುಷ್ಪ ರವೀಶ್, ಮಧುಗೌಡ, ಚೀಲೂರು ವಾಜೀದ್, ಸುಲೇಮಾನ್ ಖಾನ್, ವಾಗೀಶ್ ಸೇರಿದಂತೆ ಹಲವಾರು ಜನ ಮುಖಂಡರು, ಕಾರ್ಯಕರ್ತರು ಇದ್ದರು.

- - - -24ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನು ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಉದ್ಘಾಟಿಸಿದರು.