ಕುಡಿದು ಬೈಕಲ್ಲಿ ಬಿದ್ದು ಕಿಡ್ನಾಪ್‌ ಕತೆ ಕಟ್ಟಿದ ಎಎಸ್‌ಐ ಪುತ್ರ!

| Published : May 25 2024, 01:33 AM IST

ಕುಡಿದು ಬೈಕಲ್ಲಿ ಬಿದ್ದು ಕಿಡ್ನಾಪ್‌ ಕತೆ ಕಟ್ಟಿದ ಎಎಸ್‌ಐ ಪುತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ಪ ಬೈಯ್ಯುತ್ತಾರೆ ಎಂದು ಭಯಕ್ಕೆ ನಾಟಕವಾಡಿ 4 ದಿನದ ಹಿಂದೆ ಸ್ನೇಹಿತರೊಂದಿಗೆ ಮದ್ಯ ಪಾರ್ಟಿ ಮಾಡಿದ ಬಳಿಕ ಜ್ಞಾನಭಾರತಿ ಬಳಿಯ ಆಶ್ರಮ ಬಳಿ ಬೈಕಲ್ಲಿ ಬಿದ್ದ. ನಂತರ ತಾನೇ ಕೈ, ಮೈಗೆ ಕೊಯ್ದುಕೊಂಡು ಕತೆ ಹೆಣೆದರೂ ಸಿಸಿ ಕ್ಯಾಮೆರಾದಲ್ಲಿ ಯುವಕನ ರಹಸ್ಯ ಬಯಲು ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯ ಸೇವಿಸಿ ಬೈಕ್ ಓಡಿಸುವಾಗ ಆಯತಪ್ಪಿ ಬಿದ್ದು ಬಳಿಕ ಅಪ್ಪನಿಗೆ ಹೆದರಿ ಅಪಹರಣ ನಾಟಕ ಸೃಷ್ಟಿಸಿದ್ದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರ (ಎಎಸ್‌ಐ) ಪುತ್ರನ ಅಸಲಿ ಮುಖ ಜ್ಞಾನಭಾರತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಮಂಗನಹಳ್ಳಿ ಸಮೀಪದ ಬಸವೇಶ್ವರ ಬಡಾವಣೆ ನಿವಾಸಿ ಗೌತಮ್ ಸುಭಾಷ್ ಸಿಕ್ಕಿಬಿದ್ದಿದ್ದು, ನಾಲ್ಕು ದಿನಗಳ ಹಿಂದೆ ತನ್ನ ಸ್ನೇಹಿತರ ಜತೆ ಕೆಂಗೇರಿ ಬಳಿ ಮದ್ಯ ಪಾರ್ಟಿ ಮುಗಿಸಿ ಆತ ಮನೆಗೆ ಮರಳುವಾಗ ಈ ಘಟನೆ ನಡೆದಿತ್ತು. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಆತನ ತಂದೆ ಕಾರ್ಯನಿರ್ವಹಿಸುತ್ತಿದ್ದಾರೆ.

ಮದ್ಯ ಸೇವಿಸಿದ್ದರಿಂದ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಜ್ಞಾನಭಾರತಿ ಸಮೀಪದ ಅಮ್ಮ ಆಶ್ರಮ ಬಳಿ ಗೌತಮ್ ಕೆಳಗೆ ಬಿದ್ದು ಗಾಯಗೊಂಡಿದ್ದ. ಆದರೆ ತಾನು ಮದ್ಯ ಸೇವಿಸಿರುವುದು ತಂದೆಗೆ ಗೊತ್ತಾದರೆ ಬೈಯುತ್ತಾರೆ ಎಂದು ಹೆದರಿದ ಆತ, ತಾನೇ ಬೈಕ್‌ನ ಟೂಲ್ಸ್ ಬಾಕ್ಸ್‌ನಲ್ಲಿದ್ದ ಬ್ಲೇಡ್‌ನಿಂದ ಎಡಗೈ, ಎಡಭುಜಕ್ಕೆ ಕೊಯ್ದುಕೊಂಡು ಗಾಯ ಮಾಡಿಕೊಂಡಿದ್ದ. ಆನಂತರ ತನ್ನ ತಂದೆ ಹಾಗೂ ಗೆಳೆಯರಿಗೆ ಕರೆ ಮಾಡಿ ಅಪಹರಣಕ್ಕೆ ಒಳಗಾಗಿರುವುದಾಗಿ ಸುಳ್ಳು ಹೇಳಿದ್ದ. ಈ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆತನ ತಂದೆ ತೆರಳಿದ್ದರು. ಬಳಿಕ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದ.

ತಾನು ಬೈಕ್‌ನಲ್ಲಿ ಬರುವಾಗ ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿ ನನ್ನನ್ನು ಅಡ್ಡಗಟ್ಟಿದ್ದರು. ನೀನು ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆ ಎಎಸ್‌ಐ ಪುತ್ರ ಅಲ್ವ ಅಂದರು. ಆಗ ನಾನು ಹೌದು ಎಂದೇ. ನನ್ನ ಬೈಕ್‌ನಲ್ಲಿ ಅವರು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ ನಿನ್ನ ತಂಗಿ ಯಾವ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂಬುದು ಗೊತ್ತು. ಪೊಲೀಸರಿಗೆ ದೂರು ಕೊಟ್ಟರೇ ಆಕೆಯನ್ನು ರೇಪ್ ಮಾಡಿ, ಕೊಲೆ ಮಾಡುತ್ತೇವೆ. ನಿನ್ನ ತಂದೆ, ತಾಯಿಯನ್ನೂ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾದರು ಎಂದು ಗೌತಮ್‌ ಹೇಳಿಕೆ ಕೊಟ್ಟಿದ್ದ.

ಈ ಹೇಳಿಕೆ ಆಧರಿಸಿ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಕೊನೆಗೆ ಗೌತಮ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.