ಕನ್ನಡಪ್ರಭವಾರ್ತೆ, ತುರುವೇಕೆರೆ

ನಾನು ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಗಳಿಗೆ, ಸಂಕಷ್ಠದಲ್ಲಿರುವ ಬಡವರಿಗೆ, ರೋಗಿಗಳಿಗೆ, ಅಸಹಾಯಕರಿಗೆ, ಚಿರತೆಯಿಂದ ಸತ್ತವರ ಕುಟುಂಬಕ್ಕೆ ಹಣದ ನೆರವು ನೀಡಿದರೆ ಅದು ಗುಂಪುಗಾರಿಕೆ ಆಗುತ್ತಾ?. ಎಂದು ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಪ್ರಶ್ನಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ದೊಡ್ಡಾಘಟ್ಟ ಚಂದ್ರೇಶ್ ಮೊನ್ನೆ ಶಾಸಕ ಎಂ.ಟಿ.ಕೃಷ್ಣಪ್ಪನವರು ನಡೆಸಿದ ಕಾರ್ಯಕರ್ತರ ಸಭೆಯ ವೇಳೆ ತಮ್ಮ ಮೇಲೆ ಗುಂಪುಗಾರಿಕೆ ಮಾಡಲಾಗುತ್ತಿದೆ ಎಂಬ ಅಪವಾದ ಮಾಡಿದ್ದಾರೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನ ಹೆಸರಿನಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇನೆ. ನಾನೆಂದೂ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರ ಗೆಲುವಿನಲ್ಲಿ ನನ್ನ ಪ್ರಯತ್ನವೂ ಇದೆ. ಕಳೆದ ಬಾರಿಯೇ ನನ್ನದು ಕೊನೆ ಚುನಾವಣೆ ಎಂದು ಹೇಳಿದ್ದರು. ತಾಲೂಕಿನಲ್ಲಿರುವ ಭಿನ್ನಾಭಿಪ್ರಾಯ ಇದ್ದರೂ ಸಹ ಕೃಷ್ಣಪ್ಪನವರನ್ನು ಗೆಲ್ಲಿಸಿದ್ದರು. ಸಹಜವಾಗಿ ಎಲ್ಲರಿಗೂ ಶಾಸಕನಾಗಬೇಕೆಂಬ ಆಸೆ ಇರುತ್ತದೆ. ಹಾಗಾಗಿ ನಾನೂ ಸಹ ಜೆಡಿಎಸ್ ನ ಪ್ರಭಲ ಆಕಾಂಕ್ಷಿಯಾಗಿದ್ದೇನೆ ಎಂದು ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.

ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ತಮ್ಮನ್ನು ಕಾಂಗ್ರೆಸ್ ಸೇರಿ ನನ್ನನ್ನು ಸೋಲಿಸಿ ಎಂದು ಹೇಳಿದ್ದು ನನಗೆ ಬೇಸರ ತರಿಸಿದೆ. ನಾನು ಕಟ್ಟಾ ಜೆಡಿಎಸ್ ಬೆಂಬಲಿಗ. ನನ್ನನ್ನು ಕಾಂಗ್ರೆಸ್ ಸೇರಿ ಎಂದು ಹೇಳಿದುದು ಸರಿಯಲ್ಲ. ನಾನು ಪಕ್ಷಾಂತರಿ ಅಲ್ಲ. ನನ್ನ ರಾಜಕೀಯ ಜೀವನ ಪ್ರಾರಂಭ ಜೆಡಿಎಸ್ ನಿಂದ, ನನ್ನ ರಾಜಕೀಯ ಅಂತ್ಯ ಜೆಡಿಎಸ್ ನಿಂದಲೇ. ನನ್ನ ನಾಯಕ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರು. ಇದರಲ್ಲಿ ಸಂದೇಹವೇ ಬೇಡ. ನನ್ನ ಪಕ್ಷ ಪ್ರೇಮವನ್ನು ಪರೀಕ್ಷೆ ಮಾಡುವ ನೈತಿಕತೆ ಬೇರೆ ಯಾರಿಗೂ ಬೇಡ ಎಂದು ಚಂದ್ರೇಶ್ ಕಿಡಿಕಾರಿದರು. ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಶಿವಲಿಂಗೇಗೌಡ ಮಾತನಾಡಿ ಶಾಸಕರು ಸಾಕಷ್ಟು ಬಾರಿ ಇದು ನನ್ನದು ಕೊನೆ ಚುನಾವಣೆ ಅಂತ ಘೋಷಣೆ ಮಾಡಿದ್ದರು. ಹಾಗಾಗಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರೇಶ್ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಪಡೆಯುವ ಉತ್ಸಾಹದಲ್ಲಿದ್ದಾರೆ. ಚಂದ್ರೇಶ್ ಯುವಕರಾಗಿದ್ದಾರೆ. ತಾಲೂಕಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ, ಜನರ ಪ್ರೀತಿ ಗಳಿಸಿದ್ದಾರೆ. ಅವರಿಗೂ ಒಂದು ಅವಕಾಶ ಮಾಡಿ ಕೊಡಿ ಎಂದು ರಾಜ್ಯ ಜೆಡಿಎಸ್ ವರಿಷ್ಠರನ್ನು ಆಗ್ರಹಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪನವರು ದೊಡ್ಡಾಘಟ್ಟ ಚಂದ್ರೇಶ್ ರವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನೀವು ಮಾಡದ ಸೇವೆಯನ್ನು ಚಂದ್ರೇಶ್ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬೆಳೆಯಲು ಕೃಷ್ಣಪ್ಪನವರು ಬಿಡುತ್ತಿಲ್ಲ. ತಾಲೂಕಿನ ಯುವ ಜನತೆ ಚಂದ್ರೇಶ್ ರವರೊಂದಿಗೆ ಇದ್ದಾರೆ. ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಅವರನ್ನು ಶಾಸಕರನ್ನಾಗಿ ನೋಡುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಯರದೇಹಳ್ಳಿ ನವೀನ್ ಹೇಳಿದರು.


ಈ ಸಂದರ್ಭದಲ್ಲಿ ಮುಖಂಡರಾದ ಡಾ.ನಂಜಪ್ಪ, ನಾಗರಾಜಯ್ಯ, ಗೋವಿಂದಣ್ಣ, ದಂಡಿನಶಿವರ ಗುಡಿಗೌಡರಾದ ಬೋರೇಗೌಡ, ಮಲ್ಲಾಘಟ್ಟ ಮಣಿಪಾಲ್ ರಾಜಣ್ಣ, ಕಣತೂರು ರವಿಕುಮಾರ್, ಮದ್ದನಹಳ್ಳಿ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.