ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಜಿಲ್ಲಾದ್ಯಂತ ಸ್ವಚ್ಛ ಮತ್ತು ಶುದ್ಧ ಕುಡಿವ ನೀರಿನ ಕೊರತೆ ಜನರನ್ನು ತೀವ್ರವಾಗಿ ಕಾಡುತ್ತಿದ್ದು, ಅದಕ್ಕಾಗಿ ಜಿಲ್ಲಾಡಳಿತ ಟ್ಯಾಂಕರ್, ನದಿ ಪಾತ್ರದ ಡೆಡ್ ಸ್ಟೋರೇಜ್ ನಿಂದ ಸಂಗ್ರಹಿಸಿದ ನೀರು ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಏಪ್ರೀಲ್ ಮೇ ತಿಂಗಳಲ್ಲಿ ಅತೀ ಹೆಚ್ಚಿನ ವಾಂತಿ ಭೇದಿ ಪ್ರಕರಣಗಳು ಪತ್ತೆಯಾಗಿದ್ದು, ಬಡವರು,ಗ್ರಾಮೀಣ ಜನರನ್ನು ಕಂಗೆಡಿಸಿದೆ.ಕಳೆದ ಸಾಲಿನಲ್ಲಿ ತೀವ್ರವಾದ ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕುಡಿವ ನೀರಿನ ಕೊರತೆ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಕಾಡುತ್ತಿದೆ. ಅದರಲ್ಲಿಯೂ ತುಂಗಭದ್ರಾ ನದಿ ನೀರನ್ನೇ ಆಶ್ರಯಿಸಿರುವ ಗದಗ, ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಗಂಭೀರ ಸಮಸ್ಯೆ ಸೃಷ್ಟಿಸಿದ್ದು, ಇದರಿಂದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.
1130 ವಾಂತಿ ಭೇದಿ ಪ್ರಕರಣ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಜನವರಿಯಿಂದ ಮೇ ವರೆಗೆ (5ತಿಂಗಳಲ್ಲಿ) ಒಟ್ಟು 1130 ಜನರಲ್ಲಿ ತೀವ್ರ ತೆರನಾದ ವಾಂತಿ ಭೇದಿ ಕಾಣಿಸಿಕೊಂಡು ಅವರೆಲ್ಲ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ವಾಂತಿ ಭೇದಿ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಪ್ರಮುಖ ಕಾರಣ ಸಾರ್ವಜನಿಕರು ಬಳಸುತ್ತಿರುವ ಕುಡಿವ ನೀರು. ನದಿ ಪಾತ್ರದಲ್ಲಿ ನೀರು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಡೆಡ್ ಸ್ಟೋರೇಜ್ ನಲ್ಲಿ ಬಹಳಷ್ಟು ತಿಂಗಳಿಂದ ನಿಂತ ನೀರನ್ನೇ ಪೂರೈಕೆ ಮಾಡುತ್ತಿರುವುದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವೇಳೆಯಲ್ಲಿ ಸ್ವಚ್ಛತೆ ಇಲ್ಲದೇ ಇರುವುದೇ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.31 ಡೇಂಘಿ ದೃಢ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕವಾಗಿ ಕಾಣಿಸಿಕೊಂಡಿರುವ ಡೆಂಘಿ ಗದಗ ಜಿಲ್ಲೆಯಲ್ಲಿ ಹತೋಟಿಯಲ್ಲಿದ್ದು, ಜನವರಿಯಿಂದ ಇಲ್ಲಿಯವರೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸಂಶಯಾಸ್ಪದವಾಗಿ ಕಂಡು ಬಂದ 607 ಜನರಲ್ಲಿ ಡೆಂಘಿ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 31 ಜನರಿಗೆ ಡೆಂಘಿ ದೃಢಪಟ್ಟಿದ್ದು ಅವರೆಲ್ಲರೂ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ.
6 ಜನರಿಗೆ ಚಿಕುನ್ ಗುನ್ಯಾ: ಮಾರಣಾಂತಿಕವಲ್ಲದಿದ್ದರೂ ಜನರ ಜೀವವನ್ನು ಇನ್ನಿಲ್ಲದಂತೆ ಹಿಂಡುವ ಚಿಕುನ್ ಗುನ್ಯಾ ಕೂಡಾ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಒಟ್ಟು ಸಂಶಯ ಕಂಡು ಬಂದ 84 ಜನರನ್ನು ತಪಾಸಣೆಗೆ ಒಳಪಡಿಸಿದಾಗ, ಕೇವಲ 6 ಜನರಲ್ಲಿ ಚಿಕುನ್ ಗುನ್ಯಾ ಪತ್ತೆಯಾಗಿದೆ. ಚಿಕುನ್ ಗುನ್ಯಾ ಮತ್ತು ಡೆಂಘಿ ಎರಡೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 37 ಜನರು ಚಿಕಿತ್ಸೆ ಪಡೆದು ಈ ಎರಡೂ ಕಾಯಿಲೆಯಿಂದ ಗುಣಮುಖರಾಗಿರುವುದು ಸಮಾಧಾನದ ಸಂಗತಿಯಾಗಿದೆ.ವಾಂತಿಭೇದಿ ಗದಗ ತಾಲೂಕಿನಲ್ಲಿಯೇ ಹೆಚ್ಚು: ಜಿಲ್ಲೆಯಲ್ಲಿ ಸಧ್ಯಕ್ಕೆ ವರದಿಯಾಗಿರುವ 1130 ವಾಂತಿಭೇದಿ ಪ್ರಕರಣಗಳಲ್ಲಿ ಬಹುಪಾಲು ಪ್ರಕರಣಗಳು ಪತ್ತೆಯಾಗಿರುವುದು ಗದಗ ತಾಲೂಕಿನಲ್ಲಿ, ಅದರಲ್ಲಿಯೂ ಗದಗ ಬೆಟಗೇರಿ ಅವಳಿ ನಗರದಲ್ಲಿ, ಇದಕ್ಕೆ ಮುಖ್ಯ ಕಾರಣ ಅವಳಿ ನಗರದಲ್ಲಿ ಕಳೆದ 3 ತಿಂಗಳಿಂದ ಉಂಟಾಗಿರುವ ನೀರಿನ ಕೊರತೆ, ಜಿಲ್ಲಾಡಳಿತ ನದಿ ಪಾತ್ರ ಡೆಡ್ ಸ್ಟೋರೇಜ್ ಮತ್ತು ಟ್ಯಾಂಕರ್ ಮೂಲಕ ಮಾಡುತ್ತಿರುವ ನೀರಿನಲ್ಲಿ ಸ್ವಚ್ಛತೆ ಕಡಿಮೆ ಹಾಗೂ ಟ್ಯಾಂಕರ್ ನೀರು ಕ್ಲೋರೀನ್ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಗದಗ ಜಿಲ್ಲೆಯಲ್ಲಿ ಯಾವುದೇ ಕಾಲರಾ ಪ್ರಕರಣಗಳಿಲ್ಲ ಅಲ್ಲಲ್ಲಿ ವಾಂತಿಭೇದಿ ಪ್ರಕರಣಗಳು ವರದಿಯಾಗಿವೆ, ಅದಕ್ಕಾಗಿ ಪ್ರತಿ ತಾಲೂಕಿಗೆ 5 ಜನರ ವಿಶೇಷ ತಂಡ ರಚನೆ ಮಾಡಿದ್ದು, ಸಾರ್ವಜನಿಕರಿಗೆ ಪೂರೈಕೆ ಮಾಡುವ ಕುಡಿವ ನೀರನ್ನು ಪರಿಶೀಲಿಸಿ ಅದರಲ್ಲೇನಾದರೂ ತೊಂದರೆ ಇದ್ದರೆ, ಗ್ರಾಪಂ, ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ ಆಗಿಂದಾಗಲೇ ಸರಿಪಡಿಸಿದ್ದೇವೆ. ಮೇ ತಿಂಗಳಲ್ಲಿ ವಾಂತಿಭೇದಿ ಪ್ರಕರಣಗಳು ಅಲ್ಪ ಹೆಚ್ಚಳವಾಗಿದ್ದು ಈ ಕುರಿತು ವಿಶೇಷ ಗಮನ ನೀಡಲಾಗಿದೆ. ಡೆಂಘಿ ಪ್ರಕರಣಗಳು ಅತ್ಯಂತ ಹತೋಟಿಯಲ್ಲಿದ್ದು, ನಮ್ಮ ವೈದ್ಯಕೀಯ ಸಿಬ್ಬಂದಿ ಇದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಗದಗ ಡಿಎಚ್ಓ ಡಾ.ಎಸ್.ಎಸ್. ನೀಲಗುಂದ ತಿಳಿಸಿದ್ದಾರೆ.