ಮೋಕ್ಷಕ್ಕಾಗಿ ಸುಖ, ಭೋಗಗಳ ತ್ಯಾಗಗೈದ ಏಕೈಕ ವ್ಯಕ್ತಿ ಬುದ್ಧ: ಅಮರೇಶ್ವರ ಸ್ವಾಮೀಜಿ

| Published : May 25 2024, 01:32 AM IST

ಮೋಕ್ಷಕ್ಕಾಗಿ ಸುಖ, ಭೋಗಗಳ ತ್ಯಾಗಗೈದ ಏಕೈಕ ವ್ಯಕ್ತಿ ಬುದ್ಧ: ಅಮರೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ಆಯಾಮಗಳಲ್ಲಿ ಸಮಾಜದ ಓರೆ ಕೋರೆಗಳ ತಿದ್ದಿ ಸಮಾಜವನ್ನು ಸುಧಾರಿಸಿದ ಮಹಾತ್ಮರಾಗಿದ್ದಾರೆ. ಬುದ್ಧರಾಗುವ ಮೊದಲು ಸಿದ್ಧಾರ್ಥನಾಗಿದ್ದ ಆತ ಬದುಕಿನಲ್ಲಿ ಒಂದಷ್ಟು ತ್ಯಾಗ ಮಾಡಿದ. ತಂದೆ-ತಾಯಿ, ಹೆಂಡತಿ, ರಾಜ್ಯಭಾರ ಅಲ್ಲದೇ ಸುಖ ಭೋಗಗಳನ್ನೂ ತ್ಯಾಗ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ.

ಕನ್ನಡಪ್ರಭ ವಾರ್ತೆ ಸೊರಬ

ಬದುಕಿನಲ್ಲಿ ಸುಖ ಭೋಗಗಳನ್ನು ತ್ಯಾಗ ಮಾಡಿ ಮೋಕ್ಷವನ್ನು ಮಾತ್ರ ಬಯಸಿದ ಜಗತ್ತಿನ ಏಕೈಕ ಸಂತ ಎಂದರೆ ಅದು ಗೌತಮ ಬುದ್ಧ. ಅವರನ್ನು ಭುವಿಗೆ ಕೊಡುಗೆಯಾಗಿ ನೀಡಿದ ದೇಶ ಭಾರತ ಎನ್ನುವುದು ನಮ್ಮೆಲ್ಲರ ಹೆಗ್ಗಳಿಕೆ ಎಂದು ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಪುಣ್ಯಕ್ಷೇತ್ರವಾದ ಬಂಕಸಾಣದ ಸಮಾಧಾನ ಆಶ್ರಮದಲ್ಲಿ ಸದ್ಗುರು ಸೇವಾ ಟ್ರಸ್ಟ್ ಹಾಗೂ ಜಡೆ ಹಿರೇಮಠದ ಸಹಯೋಗದಲ್ಲಿ ಆಯೋಜಿಸಿದ್ದ ಅರಿವಿನೆಡೆಗೆ ಮಾಸಿಕ ಹುಣ್ಣಿಮೆ ಕಾರ್ಯಕ್ರಮದಲ್ಲಿ ಬುದ್ಧ ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಿ ಮಾತನಾಡಿ ಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ಆಯಾಮಗಳಲ್ಲಿ ಸಮಾಜದ ಓರೆ ಕೋರೆಗಳ ತಿದ್ದಿ ಸಮಾಜವನ್ನು ಸುಧಾರಿಸಿದ ಮಹಾತ್ಮರಾಗಿದ್ದಾರೆ. ಬುದ್ಧರಾಗುವ ಮೊದಲು ಸಿದ್ಧಾರ್ಥನಾಗಿದ್ದ ಆತ ಬದುಕಿನಲ್ಲಿ ಒಂದಷ್ಟು ತ್ಯಾಗ ಮಾಡಿದ. ತಂದೆ-ತಾಯಿ, ಹೆಂಡತಿ, ರಾಜ್ಯಭಾರ ಅಲ್ಲದೇ ಸುಖ ಭೋಗಗಳನ್ನೂ ತ್ಯಾಗ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಎಂದರು.

ಜೀವನದಲ್ಲಿ ಕಂಡ ರೋಗಿ, ವೃದ್ಧ, ಶವ, ಸನ್ಯಾಸಿಯನ್ನು ನೋಡಿದ ಆತನಿಗೆ ಜೀವನವೆಲ್ಲ ನಶ್ವರ ಎನಿಸಿತು. ಆತ ಅದರ ಮೂಲವನ್ನು ಶೋಧಿಸಿದ. ಅದಕ್ಕಾಗಿ ಸನ್ಯಾಸವೇ ಸೂಕ್ತ ಎಂದು ಅದನ್ನು ಆಶ್ರಯಿಸಿದ. ನಾವು ಇಂತಹ ಸಾವಿರಾರು ಘಟನೆಗಳನ್ನು ನೋಡುತ್ತೇವೆ. ಆದರೆ ನಾವು ಬುದ್ಧರಾಗುವುದಿಲ್ಲ. ಅದಕ್ಕಾಗಿ ಪ್ರಯತ್ನವನ್ನೂ ಮಾಡುವುದಿಲ್ಲ. ಏಕೆಂದರೆ ಮನುಷ್ಯಗೆ ಲಾಲಸೆಯೇ ಅಧಿಕವಾಗಿದೆ ಎಂದು ಹೇಳದರು.

ಬುದ್ಧ ಸರ್ವರನ್ನೂ ಸಮಾಜದ ಔನ್ನತ್ಯಕ್ಕೆ ಏರಿಸಿದ. ಜಾತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದ. ಸಮಾನತೆಯ ಸಮಾಜ ಅವರ ಕನಸಾಗಿತ್ತು. ಆಸೆಯೇ ದುಃಖಕ್ಕೆ ಮೂಲ ಎಂದು ಅರಿತ ಬುದ್ಧ ಎಲ್ಲರೂ ದುರಾಸೆಯನ್ನು ತ್ಯಾಗಮಾಡಿರಿ ಎಂದು ಕರೆ ಇತ್ತ. ಬುದ್ಧ ನಮ್ಮೆಲ್ಲರ ಬದುಕಿನ ಆದರ್ಶವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಗರದ ಆರಕ್ಷಕ ಇಲಾಖೆಯ ವಿಸಿಲೆನ್ಸ್ ವಿಭಾಗದ ಶಿವರುದ್ರಯ್ಯ, ಕೋಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯರಾದ ಶಿವಾನಂದಪ್ಪ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಶ್ಚಿಂತ ಚಿದಾನಂದ, ಗೌರಮ್ಮ, ಹೇಮಲತಾ ಹಿರೇಮಠ, ಶಿವಕುಮಾರಸ್ವಾಮಿ, ಸುಮಂಗಲ ಸ್ವಾಮಿ, ಚಂದ್ರು ಮುಂತಾದವರು ಉಪಸ್ಥಿತರಿದ್ದರು.