ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶದಲ್ಲಿ ಮೊದಲ ಬಾರಿಗೆ ಜನಗಣತಿ ವಿವರವನ್ನು ಜನರೇ ಆನ್‌ಲೈನ್ ಮೂಲಕ ಭರ್ತಿಗೆ ಅವಕಾಶ ನೀಡಲಾಗಿದ್ದು, ಈ ಬಗ್ಗೆ ರಾಜ್ಯದ ಜನರಂತೆ ಚಿಕ್ಕಮಗಳೂರಿಗರೂ ನಿರಾಸಕ್ತಿ ತೋರಿದ್ದು, ಜಿಲ್ಲೆಯ ಒಟ್ಟು ಕುಟುಂಬದ ಪೈಕಿ ಶೇ.9 ರಷ್ಟು ಕುಟುಂಬಗಳೂ ಸ್ವಯಂ ಗಣತಿ ಮೂಲಕ ವಿವರ ದಾಖಲಿಸಿಲ್ಲ. ಆದರೂ ಜಿಲ್ಲೆಗೆ 6ನೇ ಸ್ಥಾನ ಸಿಕ್ಕಿದೆ.
ಏ.1 ರಿಂದ 2027ರ ಜನಗಣತಿಯ ಮೊದಲ ಹಂತ ಆರಂಭಗೊಂಡಿದೆ. ಇದರ ಭಾಗವಾಗಿ ಆನ್‌ಲೈನ್‌ನಲ್ಲಿ ಸ್ವಯಂ ಗಣತಿ ಮೂಲಕ ವಿವರವನ್ನು ಸಲ್ಲಿಸುವುದಕ್ಕೆ ಮೊದಲ 15 ದಿನ ಅಂದರೆ, ಏ.1 ರಿಂದ 15ರ ತಡರಾತ್ರಿ 12ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಅಂತಿಮವಾಗಿ ಚಿಕ್ಕಮಗಳೂರು ಜಿಲ್ಲೆಯ ಶೇ.8.51 ರಷ್ಟು ಕುಟುಂಬ ಮಾತ್ರ ಈ ಆನ್‌ಲೈನ್ ಮೂಲಕ ವಿವರವನ್ನು ಸಲ್ಲಿಸಿವೆ.28 ಸಾವಿರ ಕುಟುಂಬ ಮಾತ್ರ ವಿವರ ಸಲ್ಲಿಕೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 3.36 ಲಕ್ಷ ಕುಟುಂಬ ಇವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 15 ದಿನದಲ್ಲಿ ಕೇವಲ 28,673 ಕುಟುಂಬದ ಮಾಲೀಕರು ಆನ್‌ಲೈನ್ ಮೂಲಕ ಸ್ವಯಂ ಗಣತಿಯಲ್ಲಿ ಭಾಗವಹಿಸಿ ವಿವರ ಸಲ್ಲಿಕೆ ಮಾಡಿದ್ದಾರೆ. ಇದೂ ಜಿಲ್ಲೆಯ ಒಟ್ಟು ಕುಟುಂಬದ ಪೈಕಿ ಶೇ.8.51 ರಷ್ಟು ಮಾತ್ರ ಆಗಿದೆ.
ಚಿಕ್ಕಮಗಳೂರಿಗೆ ಆರನೇ ಸ್ಥಾನ: ಆನ್‌ಲೈನ್ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಲ್ಲಿ ಗಣಿನಾಡು ಬಳ್ಳಾರಿ ಶೇಕಡವಾರು ಲೆಕ್ಕಾಚಾರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಶೇ.19.03ರಷ್ಟು ಕುಟುಂಬಗಳು ಆನ್‌ಲೈನ್ ಮೂಲಕ ಮಾಹಿತಿ ದಾಖಲಿಸಿವೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ (ಶೇ.17.52), ಕ್ರಮವಾಗಿ ಬಾಗಲಕೋಟೆ (ಶೇ.16.53), ವಿಜಯನಗರ (ಶೇ.11.63), ತುಮಕೂರು(ಶೇ.10.62), ಆರನೇ ಸ್ಥಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಇದ್ದು, (ಶೇ.8.51 ರಷ್ಟು) ಕುಟುಂಬಗಳು ವಿವರ ದಾಖಲಿಸಿವೆ.ಇಡೀ ರಾಜ್ಯದಲ್ಲಿ 8.39 ಲಕ್ಷ ಕುಟುಂಬ ಮಾತ್ರ ಭಾಗಿ: ರಾಜ್ಯದಲ್ಲಿ ಒಟ್ಟು 1.68 ಕೋಟಿ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 8.39 ಲಕ್ಷ ಕುಟುಂಬಗಳು ಮಾತ್ರ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಕೆ ಮಾಡಿವೆ. ಬಾಕಿ ಉಳಿದ 1.60 ಕೋಟಿ ಕುಟುಂಬಗಳ ಮಾಹಿತಿಯನ್ನು ಜನಗಣತಿಗೆ ನಿಯೋಜಿಸಲಾದ ಗಣತಿದಾರರೇ ಅವರ ಮನೆ ಬಾಗಿಲಿಗೆ ಹೋಗಿ ಮಾಹಿತಿ ಸಂಗ್ರಹಿಸಿ ದಾಖಲಿಸಬೇಕಾಗಿದೆ. ಏ.16 ರ ಗುರುವಾರದಿಂದ ರಾಜ್ಯಾದ್ಯಂತ ಆರಂಭಗೊಂಡಿದೆ.
ಜಾಗೃತಿ ಕೊರತೆಯಿಂದ ಸ್ವಯಂ ಗಣತಿಗೆ ಹಿನ್ನಡೆ?
ಸ್ವಯಂ ಗಣತಿ ಪ್ರಕ್ರಿಯೆಯಡಿ ಆನ್‌ಲೈನ್ ಮೂಲಕ ವಿವರವನ್ನು ತಾವೇ ನೇರವಾಗಿ ದಾಖಲಿಸಬಹುದು ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಜಾಗೃತಿ ಮೂಡಿಸದಿರುವುದು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿಲ್ಲ. ಹೀಗಾಗಿ, ಸ್ವಯಂ ಗಣತಿ ಹಿನ್ನೆಡೆಯಾಗಿದೆ. ಜತೆಗೆ, ಮಲೆನಾಡು ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ, ಮನೆಯಲ್ಲಿ ಇರುವಾಗ ಮಾತ್ರ ಲೋಕೇಷನ್ ಆಧಾರಿತವಾಗಿ ಮಾಹಿತಿ ದಾಖಲಿಸಬೇಕು. ಈ ಕಾರಣಕ್ಕೆ ಸ್ವಯಂ ಗಣತಿಯಲ್ಲಿ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.ಗಣತಿದಾರರಿಗೆ ಸಹಕಾರ ನೀಡಿ: ಜಿಲ್ಲಾಧಿಕಾರಿ
ಏ.16ರಿಂದ ಮನೆ ಮನೆಗೆ ಭೇಟಿ ನೀಡುತ್ತಿರುವ ಗಣತಿದಾರರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೇ 16ರವರೆಗೆ ಮಾತ್ರ ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ, ಗಣತಿದಾರರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮನವಿ ಮಾಡಿದ್ದಾರೆ.ಸ್ವಯಂ ಗಣತಿಯ ಟಾಪ್ 10 ಜಿಲ್ಲೆಗಳ ವಿವರ
ಜಿಲ್ಲೆ। ಅಂದಾಜು ಕುಟುಂಬ ಸಂಖ್ಯೆ । ಸ್ವಯಂ ಗಣತಿ ಕುಟುಂಬ ಸಂಖ್ಯೆ । ಶೇಕಡಾಬಳ್ಳಾರಿ:2,98,536 - 56,807 -19.03
ದಕ್ಷಿಣ ಕನ್ನಡ:5,67,256 - 99,366 -17.52ಬಾಗಲಕೋಟೆ:4,40,602 - 72,837 -16.53
ವಿಜಯನಗರ:2,88,406 - 33,535 - 11.63ತುಮಕೂರು:7,80,899 - 82,900 - 10.62
ಚಿಕ್ಕಮಗಳೂರು3,36,824 - 28,673 -8.51ಹಾಸನ:5,28,813 - 42,277 -7.99
ಉತ್ತರ ಕನ್ನಡ:3,95,927- 28,594 - 7.22ಚಿತ್ರದುರ್ಗ:4,35,544 - 29,747 -6.83
ಬೀದರ್: 3,83,925 - 25,361 - 6.61ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರನ್ನು ಭಾಗಿಯಾಗಿಸಿಕೊಳ್ಳಬೇಕೆಂಬ ಕಾರಣಕ್ಕೆ ಮೊದಲ ಬಾರಿಗೆ ಸ್ವಯಂ ಗಣತಿಗೆ ಅವಕಾಶ ನೀಡಲಾಗಿತ್ತು. ಈ ಬಗ್ಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಿಂದ ಹೆಚ್ಚಿನ ಪ್ರಚಾರ ಕಾರ್ಯ ಮಾಡಲಾಗಿತ್ತು. ಸ್ಥಳೀಯವಾಗಿ ಪ್ರತಿ ದಿನ ತ್ಯಾಜ್ಯ ಸಂಗ್ರಹಿಸುವ ಆಟೋಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿತ್ತು. ಆದರೂ 28 ಸಾವಿರ ಕುಟುಂಬ ಮಾತ್ರ ಜಿಲ್ಲೆಯಲ್ಲಿ ಭಾಗವಹಿಸಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು.
- ಎನ್,ಎಂ,ನಾಗರಾಜ್, ಜಿಲ್ಲಾಧಿಕಾರಿ, ಚಿಕ್ಕಮಗಳೂರು