ಹುಬ್ಬಳ್ಳಿ:

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮಾಜದ ಐದು ಪ್ರಮುಖ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ 10 ದಿನ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಲಿಖಿತ ಭರವಸೆ ಸಿಗದಿದ್ದರೆ ನವೆಂಬರ್‌ನಲ್ಲಿ ಪಾದಯಾತ್ರೆ, ಸತ್ಯಾಗ್ರಹ ನಡೆಸಿ, ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಜೈನ ಸಮಾಜದ ಹಿತಾಸಕ್ತಿ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಯ ವಿಷಯದಲ್ಲಿ ಇನ್ನು ಕಾಯಲು ಸಾಧ್ಯವಿಲ್ಲ. ಸರ್ಕಾರ ಆಶ್ವಾಸನೆ ನೀಡುವ ಬದಲು ಕಾಲಮಿತಿಯೊಂದಿಗೆ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

5 ಪ್ರಮುಖ ಬೇಡಿಕೆ:

ಜೈನ ಅಭಿವೃದ್ಧಿ ನಿಗಮ ಅಥವಾ ಮಂಡಳಿ ಸ್ಥಾಪನೆ, ಜೈನ ಸಾಧು-ಸಾಧ್ವಿಯರ ಪಾದವಿಹಾರಕ್ಕೆ ಸುರಕ್ಷತೆ, ತೀರ್ಥಕ್ಷೇತ್ರ ಹಾಗೂ ಧಾರ್ಮಿಕ ಸಂಸ್ಥೆಗಳ ರಕ್ಷಣೆಗೆ ವಿಶೇಷ ನಿಯಮಗಳು, ಆರ್ಥಿಕವಾಗಿ ದುರ್ಬಲ ಭಕ್ತರಿಗೆ ಉಚಿತ ಸಮ್ಮೇದ ಶಿಖರ್ಜಿ ತೀರ್ಥಯಾತ್ರೆ ಹಾಗೂ ಸಾಧು-ಸಾಧ್ವಿಯರ ರಾತ್ರಿ ವಿಶ್ರಾಂತಿಗೆ ಸರ್ಕಾರಿ ವ್ಯವಸ್ಥೆ ಕಲ್ಪಿಸುವುದು ಪ್ರಮುಖ ಬೇಡಿಕೆಗಳಾಗಿವೆ. ಈ ಕುರಿತು ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ, ಸಮಾಜದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಪ್ರತಿ ಬೇಡಿಕೆಯ ಸ್ಥಿತಿ, ಜವಾಬ್ದಾರಿಯುತ ಇಲಾಖೆ ಮತ್ತು ಅನುಷ್ಠಾನದ ಕಾಲಮಿತಿಯನ್ನು ತಿಳಿಸುವ ಲಿಖಿತ ಉತ್ತರವನ್ನು 10 ದಿನಗಳೊಳಗೆ ನೀಡಬೇಕು ಎಂದು ಒತ್ತಾಯಿಸಿದರು.


ಚಿಕ್ಕೋಡಿಯಿಂದ ಬೆಳಗಾವಿಗೆ ಪಾದಯಾತ್ರೆ:

ಸರ್ಕಾರ ಸ್ಪಂದಿಸದಿದ್ದರೆ ಜಮಖಂಡಿ, ತೇರದಾಳ, ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಹಾಗೂ ಬೆಳಗಾವಿ ಭಾಗಗಳ ಶಾಸಕರ ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು. ಬಳಿಕ ಚಿಕ್ಕೋಡಿಯಿಂದ ಬೆಳಗಾವಿ ವರೆಗೆ ಬೃಹತ್ ಪಾದಯಾತ್ರೆ ನಡೆಸಿ ಸುವರ್ಣಸೌಧದ ಎದುರು ಸಲ್ಲೇಖವ ವ್ರತ ಆಚರಿಸುವ ಮೂಲಕ ದೇಹತ್ಯಾಗ ಮಾಡುವುದಾಗಿ ಎಚ್ಚರಿಕೆಗ ನೀಡಿದರು.

ನಮ್ಮ ಈ ಹೋರಾಟ ಅಹಿಂಸಾತ್ಮಕವಾಗಿರಲಿದ್ದು, ಯಾವುದೇ ಪಕ್ಷದ ವಿರುದ್ಧವಲ್ಲ. ಎಲ್ಲ ಪಕ್ಷಗಳ ಶಾಸಕರು ಬೇಡಿಕೆಗಳಿಗೆ ಬೆಂಬಲ ನೀಡಬೇಕು. ನವೆಂಬರ್‌ನ ಹೋರಾಟದ ಬಳಿಕವೂ ಸರ್ಕಾರ ನ್ಯಾಯಯುತ ಪರಿಹಾರ ಕಲ್ಪಿಸದಿದ್ದರೆ ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಬ್ಬಿಗೆ ₹6,000 ದರ ನಿಗದಿಪಡಿಸಿ:

ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬಿಗೆ ಟನ್‌ಗೆ ₹5 ರಿಂದ ₹6 ಸಾವಿರ ದರ ನಿಗದಿಪಡಿಸುವ ಕುರಿತು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಐದಾರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಅನ್ನದಾತರು ಮಾತ್ರವಲ್ಲ, ನಮ್ಮೆಲ್ಲರ ಜೀವನದಾತರು. ಆದರೆ, ಸಮರ್ಪಕ ಮಳೆಯಿಲ್ಲದೆ ಬಿತ್ತನೆ ಹಾಗೂ ಬೆಳೆ ಬೆಳವಣಿಗೆಗೆ ಹಿನ್ನಡೆಯಾಗಿದೆ. ಕಬ್ಬು ಕೂಡ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಸೂಕ್ತ ಬೆಲೆ ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕು ಎಂದರು.ಪ್ರಸ್ತುತ ಪರಿಸ್ಥಿತಿಯಲ್ಲಿ ಎಕರೆಗೆ 30 ಟನ್ ಕಬ್ಬು ಇಳುವರಿ ಪಡೆಯುವುದೂ ಕಷ್ಟವಾಗಿದೆ. ರೈತರ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿಗಳು ತ್ವರಿತವಾಗಿ ದರ ನಿಗದಿಪಡಿಸಬೇಕು. ರೈತರ ಆಶಯ ಈಡೇರಿಸಿ ಅವರ ಬದುಕಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.

ಈಚೆಗೆ ನಾನು 800 ಕಿಮೀ ಪಾದಯಾತ್ರೆ ನಡೆಸಿದ್ದು, ಈ ವೇಳೆ ರಾಜ್ಯದ ರೈತರ ಸಂಕಷ್ಟ ಅರಿತಿದ್ದೇನೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ತಮ್ಮ ಬೆಂಬಲವಿದೆ. ರೈತರಿಗೆ ನ್ಯಾಯ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.