ಸಾಮರಸ್ಯದ ಬದುಕಿನಿಂದ ಆತ್ಮತೃಪ್ತಿ: ದಸರಿಘಟ್ಟ ಶ್ರೀ

| Published : Jan 16 2025, 12:45 AM IST

ಸಾರಾಂಶ

ಮನುಷ್ಯ ದ್ವೇಷ, ಅಸೂಹೆ, ನಾನು, ನನ್ನದು ಎಂಬ ಸ್ವಾರ್ಥ ಬಿಟ್ಟು ಪರಸ್ಪರ, ಸಹೋದರತ್ವ, ಪ್ರೀತಿ, ವಿಶ್ವಾಸದಿಂದ ಬೆರೆತು ಜೀವನ ನಡೆಸಿದಾಗ ಮಾತ್ರ ಆತ್ಮತೃಪ್ತಿ ಲಭಿಸಲಿದೆ ಎಂದು ತಾಲೂಕಿನ ದಸರಿಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮನುಷ್ಯ ದ್ವೇಷ, ಅಸೂಹೆ, ನಾನು, ನನ್ನದು ಎಂಬ ಸ್ವಾರ್ಥ ಬಿಟ್ಟು ಪರಸ್ಪರ, ಸಹೋದರತ್ವ, ಪ್ರೀತಿ, ವಿಶ್ವಾಸದಿಂದ ಬೆರೆತು ಜೀವನ ನಡೆಸಿದಾಗ ಮಾತ್ರ ಆತ್ಮತೃಪ್ತಿ ಲಭಿಸಲಿದೆ ಎಂದು ತಾಲೂಕಿನ ದಸರಿಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರಿಘಟ್ಟದ ಶ್ರೀ ಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಶ್ರೀಮಠ ಮತ್ತು ದಸರಿಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಮನುಷ್ಯ ಮಾನವೀಯ ಮೌಲ್ಯಗಳನ್ನು ಮರೆತು, ಹಣ, ಆಸ್ತಿಗಾಗಿ ಹೆಚ್ಚು ಶ್ರಮಿಸುತ್ತಿದ್ದಾನೆ. ತನ್ನ ಸುಖವೇ ಪರಮಸುಖವೆಂದು ಭಾವಿಸುತ್ತಾ ಪರಮಾತ್ಮನನ್ನು ಕಾಣುವ ಗೋಜಿಗೆ ಹೋಗದೆ ಸ್ವಾರ್ಥದ ಬದುಕು ನಡೆಸುತ್ತಿದ್ದಾನೆ. ಮನಸ್ಸಿನಲ್ಲಿ ಎಲ್ಲಾ ರೀತಿಯ ವಿಚಾರಗಳು ಇರುತ್ತವೆ ಅದಲ್ಲಿ ಉತ್ತಮ ವಿಚಾರಗಳನ್ನು ಉಳಿಸಿ ಕೆಟ್ಟ ವಿಚಾರಗಳನ್ನು ದೇವಾಲಯ, ಮಠಗಳಿಗೆ ಬಂದಂತಹ ಸಂದರ್ಭದಲ್ಲಿ ಬಿಟ್ಟು ಹೋಗಬೇಕು. ಮನುಷ್ಯ ಎಲ್ಲರೊಟ್ಟಿಗೆ ಕೂಡಿ ಬದುಕು ನಡೆಸಿಕೊಂಡು ಹೋದರೆ ಸಮಾಜ ಸುಧಾರಣೆಯಾಗಲಿದೆ ಎಂದರು. ಗ್ರಾಮಸ್ಥರು ಮಠದ ಆವರಣದಲ್ಲಿ ಶ್ರೀಗಳು ಕಿಚ್ಚು ಹಚ್ಚಿಸಿದ ತಕ್ಷಣವೆ ಸಿಂಗರಿಸಿದ ರಾಸುಗಳು ಕಿಚ್ಚಿನಲ್ಲಿ ಹಾಯ್ದು ಓಡಿದವು. ಗೋವುಗಳಿಗೆ ತಯಾರಿಸಿದ್ದ ವಿಶೇಷ ಸಿಹಿಯೂಟವನ್ನು ಎಡೆ ಮಾಡಿ ಹಬ್ಬದ ಊಟವನ್ನು ಎಡೆಯ ರೂಪದಲ್ಲಿ ನೀಡಲಾಯಿತು. ನಂತರ ಶ್ರೀ ಚೌಡೇಶ್ವರಿ ದೇವಿಯ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣಿ ಹಾಕಿ ತಮ್ಮ ತಮ್ಮ ಮನೆಗಳಿಗೆ ತೆರಳಿದವು. ಜಾನುವಾರುಗಳಿಗೆ ಯಾವುದೆ ಸಾಂಕ್ರಾಮಿಕ ರೋಗಗಳು ಬಾದಿಸಬಾರದು ಎಂಬ ಉದ್ದೇಶದಿಂದ ಕಿಚ್ಚು ಹಾಯಿಸಲಾಗುತ್ತದೆ ಎಂಬುದು ಗ್ರಾಮೀಣರ ನಂಬಿಕೆಯಾಗಿದೆ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಭಾಗವಹಿಸಿ ಹಬ್ಬದ ಸವಿಯನ್ನು ಸವಿದರು. ನಂತರ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಎಳ್ಳು ಬೆಲ್ಲ, ಪೊಂಗಲ್ ನೀಡಿ ಆಶೀರ್ವದಿಸಿದರು.