ಸಾರಾಂಶ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಕೃ.ನರಹರಿ ಅವರು ಬುಧವಾರ ನಿಧನ ಹೊಂದಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಕೃ.ನರಹರಿ ಅವರು ಬುಧವಾರ ನಿಧನ ಹೊಂದಿದರು.ಅವರಿಗೆ 93 ವರ್ಷ ವಯಸ್ಸಾಗಿತ್ತು. ನಗರದ ಶ್ರೀರಾಂಪುರದಲ್ಲಿನ ಸ್ವಗೃಹದಲ್ಲಿ ಬೆಳಗ್ಗೆ ತಮ್ಮ ಕೊನೆ ಉಸಿರೆಳೆದರು. ಮಧ್ಯಾಹ್ನದವರೆಗೆ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ರಾಜಾಜಿನಗರದ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತಿತರರು ಅಂತಿಮ ದರ್ಶನ ಪಡೆದರು.ನರಹರಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮುಖ್ಯಶಿಕ್ಷಕ, ಶಾಖಾ ಕಾರ್ಯವಾಹ, ನಗರ ಕಾರ್ಯವಾಹ, ಭಾಗ ಕಾರ್ಯವಾಹ, ವಿಭಾಗ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆರಂಭದಲ್ಲಿ ಕೊಡಗಿನಲ್ಲಿ ಎರಡು ವರ್ಷಗಳ ಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಸಂಘದ ಸಹ ಸಂಘಸಂಸ್ಥೆಗಳಾದ ಭಾರತೀಯ ಶಿಕ್ಷಣ ಮಂಡಳ, ಮಾಧ್ಯಮಿಕ ಶಿಕ್ಷಕ ಸಂಘದಲ್ಲೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ರಾಷ್ಟ್ರೋತ್ಥಾನ ಪರಿಷತ್, ಮಿಥಿಕ್ ಸೊಸೈಟಿ, ಜನಸೇವಾ ವಿದ್ಯಾಕೇಂದ್ರ ಮುಂತಾದವುಗಳ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು.