ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅರಣ್ಯಗಳಲ್ಲಿ ದ್ವೇಷದ ಉದ್ದೇಶ ಸೇರಿ ನಾನಾ ಕಾರಣಗಳಿಗೆ ಪ್ರಾಣಿಗಳನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಇಲಾಖೆಯ 25 ಮಂದಿ ಸಿಬ್ಬಂದಿಗೆ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹಸು ತಿಂದಿದೆ ಎನ್ನುವ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕಿ ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊಲ್ಲುವವರು ಯಾರೇ ಆಗಿರಲಿ ಅಥವಾ ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಮಾನವ-ವನ್ಯಜೀವಿ ಸಹಬಾಳ್ವೆಯ ಪರಿಸರ ಪೂರಕವಾದ ಆಶಯ ಮತ್ತು ಉದ್ದೇಶಕ್ಕಾಗಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು. ರಾಜ್ಯದಲ್ಲಿ ಶೇ.33ರಷ್ಟು ಅರಣ್ಯ ಇರಬೇಕು. ಪ್ರಸ್ತುತ ಶೇ.20ರಷ್ಟು ಮಾತ್ರ ಇದೆ. ಇದನ್ನು ಶೇ.33ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅರಣ್ಯ ಒತ್ತುವರಿ ತಪ್ಪಿಸಬೇಕು-ಖಂಡ್ರೆ:ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳ ಕಷ್ಟಸಾಧ್ಯವಾಗಿದ್ದು, ಇರುವ ಅರಣ್ಯ ಒತ್ತುವರಿಯಾಗದಂತೆ ಕಾಪಾಡುವುದು ಎಲ್ಲ ಹೊಣೆ. ಈ ಕರ್ತವ್ಯವನ್ನು ಅರಣ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿ ಮೇಲೆ ದುಷ್ಪರಿಣಾಮ ಆಗುತ್ತಿದ್ದು, ಪ್ರಕೃತಿ ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು. ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳಿಂದ ಕೂಡಿದ ಪಶ್ಚಿಮಘಟ್ಟ ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಾಕವಾಗಿ ಹಬ್ಬಿದ್ದು, ಜೀವವೈವಿಧ್ಯತೆಯ ಅದ್ಭುತ ತಾಣ. ಇಷ್ಟು ಸಮೃದ್ಧ ಕಾನನ ಹೊಂದಿರುವ ನಾವು ಅದೃಷ್ಟವಂತರು ಎಂದರು.- ಬಾಕ್ಸ್-514 ಗಸ್ತು ವನಪಾಲಕರ
ಆಯ್ಕೆ ಪ್ರಟ್ಟಿ ಬಿಡುಗಡೆಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 540 ಗಸ್ತು ವನಪಾಲಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪೈಕಿ ಆಯ್ಕೆಯಾಗಿರುವ 514 ಗಸ್ತು ವನಪಾಲಕರ ಆಯ್ಕೆ ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.
-ಬಾಕ್ಸ್-ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ
ಅರಣ್ಯ ಇಲಾಖೆಯ ರಾಯಭಾರಿರಾಜ್ಯ ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕವಾಗಿರುವ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಅರಣ್ಯ ಪಡೆ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದರು. ಇದೇ ವೇಳೆ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
===-ಬಾಕ್ಸ್-ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ವಿದ್ಯುತ್ ಸ್ಥಾವರ: ಖಂಡ್ರೆಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದಿನ ಮತ್ತು ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ ನಿಂದಲೇ ಪೂರೈಸುವ ಉದ್ದೇಶದಿಂದ ಒಂದು ಮೆಗಾವ್ಯಾಟ್ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ. ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಮಾನವ-ಪ್ರಾಣಿ ಸಂಘರ್ಷ ತಪ್ಪಿಸಿ:ಕರ್ನಾಟಕವು ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹುಲಿ ಮತ್ತು ಚಿರತೆಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ವನ್ಯಜೀವಿಗಳನ್ನು ಸರಂಕ್ಷಣೆ ಮಾಡಿದ್ದರಿಂದಲೇ ಈ ಸ್ಥಾನದಲ್ಲಿರುವುದು. ಇದೇ ರೀತಿ ಎಲ್ಲಾ ವ್ಯನ್ಯ ಪ್ರಾಣಿಗಳನ್ನು ಸಂರಕ್ಷಿಸಿ ಒಂದನೇ ಸ್ಥಾನಕ್ಕೆ ಮುಟ್ಟಬೇಕು. ಇನ್ನು ಮಾನವ ಮತ್ತು ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಬೇಕು. ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ ಎಂಬುದರ ಕಾರಣ ತಿಳಿಯುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು. ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಹಾಕಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.ಹುಲಿ, ಆನೆಗಳ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಅರಣ್ಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಅರಣ್ಯ ಸಂಪತ್ತು ಸಂರಕ್ಷಣೆ ಜೊತೆ ಪ್ರಾಣಿಗಳ ಸಂತಾನ ಹೆಚ್ಚಿಸಬೇಕು. ದಿನೇ ದಿನೆ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.15,000 ಎಕ್ರೆ ಹೊಸದಾಗಿ ಅರಣ್ಯ ಅಧಿಸೂಚನೆ:
ನಾನು ಅರಣ್ಯ ಸಚಿವನಾದ ಬಳಿಕ ರಾಜ್ಯದಲ್ಲಿ 15 ಸಾವಿರ ಎಕರೆ ಪ್ರದೇಶವನ್ನು ಹೊಸದಾಗಿ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 250 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ ಪೀಳಿಗೆಗೆ ಹಸಿರು ಹೊದಿಕೆ ಉಳಿಸುವ ಸಲುವಾಗಿ ಮತ್ತು ಶ್ವಾಸತಾಣಗಳನ್ನು ಸಂರಕ್ಷಿಸುವ ಸಲುವಾಗಿ ಬೆಂಗಳೂರು ಹೆಸರುಘಟ್ಟ ಕೆರೆ ಬಳಿಯ 5,678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ. ಜೊತೆಗೆ ಮಾತಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ ಪಡೆಗಳ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.