ಸಾರಾಂಶ
ಅಂತರ್ಜಲಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ‘ನೀರಿದ್ದರೆ ನಾಳೆ’ ಎಂಬ ವಿನೂತನ ಯೋಜನೆ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ಅಂತರ್ಜಲ ಬಳಕೆ ಹೆಚ್ಚಿರುವ ರಾಜ್ಯದ 16 ಜಿಲ್ಲೆಗಳ 27 ತಾಲೂಕುಗಳ 525 ಗ್ರಾಪಂಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯ ಜಾಗೃತಿ ಅಭಿಯಾನಕ್ಕೆ ನಟ ವಸಿಷ್ಠ ಸಿಂಹ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಈ ವಿಶೇಷ ಪರಿಕಲ್ಪನೆಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.ನಾಗರಿಕರ ಪಾಲುದಾರಿಕೆ:
ಯೋಜನೆಯ ಮುಖಾಂತರ ಗ್ರಾಮೀಣ ಭಾಗದಲ್ಲಿ ಸಮುದಾಯ ಸಹಭಾಗ್ವಿತದೊಂದಿಗೆ ಅಂತರ್ಜಲ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಸಮೃದ್ಧ, ಸುಭದ್ರ ಹಾಗೂ ಸುಸ್ಥಿರ ಕರ್ನಾಟಕ ನಿರ್ಮಾಣ ನಮ್ಮ ಗುರಿ. ನೀರಿನ ಮಹತ್ವ ತಿಳಿಸುವುದು, ರಾಜ್ಯದ ಎಲ್ಲ ಜಲ ಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನು ಈ ನೀರಿನ ಸಂರಕ್ಷಣೆ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಯೋಜನೆ ಮುಖ್ಯ ಉದ್ದೇಶ ಎಂದರು.ಈ 525 ಗ್ರಾಪಂಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗದ ಅಂತರ್ಜಲ ಬಳಕೆ ಹೆಚ್ಚಿರುವ 100ಕ್ಕೂ ಅಧಿಕ ಗ್ರಾಪಂಗಳಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 2025-26ನೇ ಅರ್ಥಿಕ ಸಾಲಿನಲ್ಲಿ 200 ಕೋಟಿ ರು. ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬೋಸರಾಜು ಹೇಳಿದರು.
ಯೋಜನೆಯಡಿ ಹಲವು ಕಾರ್ಯಕ್ರಮ:ನೀರಿದ್ದರೆ ನಾಳೆ ಯೋಜನೆ ಮುಖಾಂತರ ರಾಜ್ಯದಲ್ಲಿ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡಲಾಗುವುದು. ಶಾಲಾ ಮಟ್ಟದಲ್ಲೇ ಜಾಗೃತಿ ಮೂಡಿಸಲಾಗುವುದು. ಕೆರೆ ಬಳಕೆದಾರರ ಸಂಘಗಳ ಮೂಲಕ ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಒತ್ತು, ಕೆರೆ ಹಬ್ಬಗಳು, ನೀರಿನ ವಾಯುವರ್ಧಕ ಬಳಕೆಗೆ ಉತ್ತೇಜನ, ಮಳೆ ನೀರು ಕೊಯ್ದು ಪದ್ಧತಿಗೆ ಉತ್ತೇಜನ, ಗ್ರಾಪಂ ಮಟ್ಟದಲ್ಲಿ ನೀರಿನ ಲಭತ್ಯೆ ಹಾಗೂ ಅದರ ಬಳಕೆ ಸಮತೋಲನಗೊಳಿಸುವುದು ಸೇರಿದಂತೆ ಅಂತರ್ಜಲ ವೃದ್ಧಿಗೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಿದ್ದರೆ ನಾಳೆ ಗ್ರಾಮ ಸಭೆ:ಪ್ರತಿ ವರ್ಷ ಗ್ರಾಪಂ ಮಟ್ಟದಲ್ಲಿ ನೀರಿನ ಭದ್ರತಾ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ವಿಶ್ವ ಜಲ ದಿನದಂದು ವಿಶೇಷ ‘ನೀರಿದ್ದರೆ ನಾಳೆ ಗ್ರಾಮ ಸಭೆ’ ಆಯೋಜಿಸಲಾಗುವುದು. ಈ ಸಭೆಯಲ್ಲಿ ಜಲಮೂಲಗಳ ಸಂರಕ್ಷಣೆ, ಮಳೆ ನೀರು ಕೊಯ್ಲು ಯೋಜನೆಗೆ ಪ್ರೋತ್ಸಾಹ, ಜಲ ಸಂರಕ್ಷಣಾ ರಚನೆಗಳ ನಿರ್ಮಾಣ ಸೇರಿ ಇತರೆ ಅಂತರ್ಜಲ ವೃದ್ಧಿ ಸಂಬಂಧಿತ ವಿಚಾರಗಳ ಬಗ್ಗೆ ಸಲಹೆ-ಸೂಚನೆ ಸ್ವೀಕರಿಸಲಾಗುವುದು ಎಂದು ಸಚಿವರು ತಿಳಿಸಿದರು.