ಕನ್ನಡಪ್ರಭ ವಾರ್ತೆ ಬೆಳ್ತಂಗಡಿ/ಕುಕ್ಕೆ ಸುಬ್ರಹ್ಮಣ್ಯ
ಸರಣಿ ರಜೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಕನ್ಯಾಡಿ ಶ್ರೀರಾಮ ಮಂದಿರ, ಸೂರ್ಯ ಸದಾಶಿವ ರುದ್ರ ದೇವಸ್ಥಾನ, ಸೌತಡ್ಕ ಮಹಾಗಣಪತಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ಭಾನುವಾರ ಹೆಚ್ಚಿನ ಜನಸಂದಣಿ ಕಂಡು ಬಂತು. ದೇವಸ್ಥಾನಗಳ ಅನ್ನಛತ್ರಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಅನ್ನ ಪ್ರಸಾದ ಸ್ವೀಕರಿಸಿದರು.ಧರ್ಮಸ್ಥಳದಲ್ಲಿ ಕಳೆದ 2 ದಿನಗಳಲ್ಲಿ 75 ಸಾವಿರಕ್ಕಿಂತ ಅಧಿಕ ಮಂದಿ ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಉಜಿರೆ, ಕನ್ಯಾಡಿ, ಧರ್ಮಸ್ಥಳ ಮೊದಲಾದ ಕಡೆ ಇರುವ ಲಾಡ್ಜ್‌ಗಳು ಭರ್ತಿಯಾಗಿದ್ದವು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಿನ ವಾಹನಗಳ ಓಡಾಟ ಕಂಡು ಬಂತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂದಿದ್ದು, ಭಾನುವಾರ ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಸ್ವೀಕರಿಸಿದ್ದಾರೆ. ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆ ತನಕ ಭಕ್ತರಿಗೆ ಫಲಹಾರ ವಿತರಿಸಲಾಯಿತು. ಬಳಿಕ 10.30ರಿಂದ ಸಂಜೆ 4 ಗಂಟೆ ತನಕ ನಿರಂತರ ಭೋಜನ ನೀಡಲಾಯಿತು. ಷಣ್ಮುಖ ಪ್ರಸಾದ ಭೋಜನ ಶಾಲೆ, ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪ, ಶೃಂಗೇರಿ ಮಠ ಹಾಗೂ ಭಕ್ತರ ಬಿಡಾರದಲ್ಲಿ ಭಕ್ತರು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ರಾತ್ರಿ 7.30ರಿಂದ 11 ಗಂಟೆಯ ತನಕ ನಿರಂತರವಾಗಿ ಷಣ್ಮುಖ ಪ್ರಸಾದ ಭೋಜನಶಾಲೆಯಲ್ಲಿ ಭಕ್ತರು ರಾತ್ರಿಯ ಪ್ರಸಾದ ಭೋಜನ ಸ್ವೀಕರಿಸಿದರು.ಪ್ರಮುಖ ಸೇವೆಗಳಾದ ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ, ಶೇಷಸೇವೆ, ಕಾರ್ತಿಕಪೂಜೆ, ಮಹಾಭಿಷೇಕ ಮೊದಲಾದ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ದೇವಳದ ವಸತಿ ಗೃಹಗಳು ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು. ಕುಕ್ಕೆಯ ಬಸ್ ನಿಲ್ದಾಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ದೇವಳದ ಪಾರ್ಕಿಂಗ್ ಸ್ಥಳಗಳು ತುಂಬಿದ್ದವು.