ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿವಿ ಘಟಕ ಪ್ರಥಮ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಹೇಳಿದರು.

ಸಮ್ಮೇಳನದ ಲಾಂಛನವನ್ನು ವಿವಿ ಕ್ಯಾಂಪಸ್‌ನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಾವೇರಿ ವಿಶ್ವವಿದ್ಯಾಲಯದ ಸ್ಥಾಪನೆಗೊಂಡ ಮೂರು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯಗಳ ಕೊರತೆಗಳ ಮಧ್ಯೆ ಬಳಲುತ್ತಿದೆ. ಅನುದಾನ ನೀಡಿ ಅಭಿವೃದ್ಧಿ ಮಾಡಬೇಕಿದ್ದ ಸರ್ಕಾರವೇ ವಿವಿ ಮುಚ್ಚುವ ಹುನ್ನಾರ ನಡೆಸಿತ್ತು. ಈ ಹುನ್ನಾರು ನೀತಿಯನ್ನು ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಪ್ರಗತಿಪರ, ಸಮಾನಮನಸ್ಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿ ಉಳಿಸಿಕೊಳ್ಳಲಾಗಿದೆ ಎಂದರು. ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸುಸಜ್ಜಿತ ರಸ್ತೆ, ನಿರಂತರ ಸಮರ್ಪಕ ಬಸ್ ವ್ಯವಸ್ಥೆ, ಹಾಸ್ಟೆಲ್ ಗಳ ಮಂಜೂರು, ಕುಡಿಯುವ ನೀರು, ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಪ್ರಯೋಗಾಲಯ, ಮಾಧ್ಯಮ ಸ್ಟುಡಿಯೋ, ಕಾಯಂ ಉಪನ್ಯಾಸಕರು, ಸಿಬ್ಬಂದಿ ನೇಮಕಾತಿ, ವಿದ್ಯಾರ್ಥಿ ವೇತನ ಸಮಸ್ಯೆಗಳು, ಪ್ರವೇಶ ಹಾಗೂ ಪರೀಕ್ಷಾ ಶುಲ್ಕ ಏರಿಕೆ, ಅಂಕಪಟ್ಟಿ ವಿತರಣೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅತ್ಯಂತ ಅವಶ್ಯಕತೆಯಿದೆ. ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಅನುದಾನ ಒದಗಿಸುವ ಮೂಲಕ ವಿವಿ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ.

ಈ ಎಲ್ಲಾ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಬಲಿಷ್ಠ ವಿದ್ಯಾರ್ಥಿ ಚಳವಳಿ ಕಟ್ಟುವ ಅವಶ್ಯಕತೆಯಿದೆ. ವಿದ್ಯಾರ್ಥಿ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು, ನಿರ್ಣಯಗಳನ್ನು ಕೈಗೊಳ್ಳಲು ಎಸ್ಎಫ್ಐ ವಿವಿ ಘಟಕ ಪ್ರಥಮ ಸಮ್ಮೇಳನವನ್ನು ಜೂ.17ರಂದು ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಗವತ್, ಕ್ಯಾಂಪಸ್ ವಿದ್ಯಾರ್ಥಿ ಮುಖಂಡ ಶಂಭುಲಿಂಗ ಸವದತ್ತಿ, ಕಾತೇಶ್ ಪಿ.ಎಚ್., ಪರಶುರಾಮ ಎಸ್., ಅರುಣ್ ಜೆ., ನಂದಿನಿ, ಚೈತ್ರಾ ಪಿಶೆ, ಶರಣಪ್ಪ ಇತರರು ಇದ್ದರು.