ಹಾವೇರಿ: ಸಂಶೋಧನೆ ಎಂಬುದು ಅಪಾರ ಪರಿಶ್ರಮ, ತಾಳ್ಮೆ ಮತ್ತು ಸತ್ಯಸಂಧತೆಯನ್ನು ಬಯಸುತ್ತದೆ. ಹೊಸ ಇತಿಹಾಸ ಸೃಷ್ಟಿಯಾಗುವ ಜವಾಬ್ದಾರಿ ಜೊತೆಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ವಿಶ್ಲೇಷಣೆ ಅಗತ್ಯವಿದೆ. ಇಂಥಹ ಸವಾಲನ್ನು ಸಮರ್ಥವಾಗಿ ಎದುರಿಸಿ, ಸಂಶೋಧನೆಗೆ ಅನ್ವರ್ಥವಾಗಿ ಬದುಕಿದವರು ದಿ. ಡಾ. ಭೋಜರಾಜ ಪಾಟೀಲ ಎಂದು ಬಾಗಲಕೋಟಿಯ ಬಸವೇಶ್ವರ ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.ನಗರದ ಗೆಳೆಯರ ಬಳಗದ ಮಣಿಭಾಯಿ ಲೋಡಾಯಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಖ್ಯಾತ ಸಂಶೋಧಕ ದಿ. ಡಾ. ಭೋಜರಾಜ ಪಾಟೀಲ ಇವರ ದತ್ತಿ ನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಂಶೋಧನೆಗೆ ಎಂದೂ ರಾಜಿಯಾಗದ ಡಾ. ಭೋಜರಾಜರು ಸಂಶೋಧಿಸಿದ ನಾಗರಖಂಡ-70 ಕೃತಿಯು ಇಡೀ ದಕ್ಷಿಣ ಭಾರತ ಇತಿಹಾಸದ ಹಲವು ಮಜಲುಗಳಿಗೆ ಬೆಳಕು ಚೆಲ್ಲಿದೆ. ಹಾವೇರಿ ಜಾನಪದ ವಿವಿ ಪ್ರಕಟಿಸಿದ ಹಾವೇರಿ ಗ್ರಾಮ ಚರಿತ್ರೆ ಕೋಶ ಗ್ರಂಥವು ಇವರ ಕತೃತ್ವ ಶಕ್ತಿಗೆ ಉತ್ತಮ ಉದಾಹರಣೆಯಾಗಿದೆ. ಒಂದು ಸಂಸ್ಥೆ ಹತ್ತಾರು ಜನರೊಂದಿಗೆ ಮಾಡುವ ಕೆಲಸವನ್ನು ಒಬ್ಬ ವ್ಯಕ್ತಿ ಮಾಡಿದಿರುವದು ಶ್ಲಾಘನೀಯವಾಗಿದೆ. ಕೇವಲ ಸಂಶೋಧನೆಗೆ ಮಾತ್ರವಲ್ಲದೇ ನಾಟಕ, ಕಥೆ, ಧಾರ್ಮಿಕ ಸಾಹಿತ್ಯದಲ್ಲಿಯೂ ಅವರ ಸಾಹಿತ್ಯ ರಚನೆ ಗಮನಾರ್ಹವಾದುದು ಎಂದು ಹೇಳಿದರು.ಚಿತ್ರದುರ್ಗದ ಸಂಶೋಧಕ, ಸಾಹಿತಿ ರಾಜಶೇಖರಪ್ಪ ಮಾತನಾಡಿ, ಚಾರಿತ್ರಿಕ ನೋಟಗಳ ಮೂಲಕ ಜನಸಾಮಾನ್ಯರ ಬದುಕಿನ ಮಗ್ಗುಲುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟ ಡಾ. ಭೋಜರಾಜ ಪಾಟೀಲರು ದೇಸಿ ಅಧ್ಯಯನಗಳ ಚಿಂತಕರಾಗಿದ್ದಾರೆ. ಅವರು ಸಂಶೋಧಿಸಿದ ಹಿರೇಕೆರೂರು ತಾಲ್ಲೂಕು ಗ್ರಾಮನಾಮ ಅಧ್ಯಯನ ಚರಿತೆಯು ನಾಮವಿಜ್ಞಾನ ಕ್ಷೇತ್ರಕ್ಕೆ ಒಂದು ಅತ್ಯಮೂಲ್ಯ ಕೊಡುಗೆ. ಸಂಶೋಧಕ ವಿದ್ಯಾರ್ಥಿಗಳಿಗೆ ಇದು ಒಂದು ಅಧ್ಯಯನ ವಸ್ತುವಾಗಿದೆ ಎಂದು ಹೇಳಿದರು.ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ ಮಾಡಿನಾಡಿ, ಡಾ. ಭೋಜರಾಜ ಪಾಟೀಲರು ಸಿದ್ಧ ಮಾದರಿಯ ಸಂಶೋಧನೆಗೆ ಅಂಟಿಕೊಳ್ಳದೇ ವಿನೂತನ ಪ್ರಯೋಗಗಳಿಗೆ ಕೈ ಹಾಕಿ ಯಶಸ್ವಿಯಾದರು. ತಮ್ಮ ಜೊತೆಗೆ ಅಪಾರ ಶಿಷ್ಯ ಬಳಗವನ್ನು ಬೆಳೆಸಿದರು. ಶಾಸನಗಳ ಅಧ್ಯಯನವನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ಸಂಶೋಧಿಸಿ, ಪ್ರಕಟಿಸಿದರು. ಇಂದು ಹಾವೇರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಶಾಸನಗಳು ಬೆಳಕಿಗೆ ಬಂದಿದ್ದರೆ ಅದಕ್ಕೆ ಭೋಜರಾಜ ಪಾಟೀಲರ ಶ್ರಮವೇ ಕಾರಣ ಎಂದು ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧಕ ಭೋಜರಾಜ ಪಾಟೀಲರು ಸಂಗ್ರಹಿಸಿದ ಹಲವಾರು ಹಸ್ತಪ್ರತಿಗಳು ಇನ್ನೂ ಅಪ್ರಕಟವಾಗಿವೆ. ಅವುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕಸಾಪ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಅವುಗಳನ್ನು ಪ್ರಕಟಿಸುವ ಕೆಲಸ ಮಾಡಲಾಗುವುದು. ಅವರ ಹಸ್ತಪ್ರತಿಗಳು, ತಾಡೋಲೆಗಳು ಇದ್ದರೆ ಅವುಗಳನ್ನು ಪ್ರಕಟಣೆಗೆ ನೀಡಬೇಕೆಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಎಸ್‌.ಎನ್. ದೊಡ್ಡಗೌಡರ ಮಾತನಾಡಿ, ಡಾ. ಭೋಜರಾಜರು ಕೇವಲ ಸಂಶೋಧಕರು ಅಷ್ಟೇ ಅಲ್ಲದೇ, ಉತ್ತಮ ಪ್ರಾಧ್ಯಾಪಕರು ಆಗಿದ್ದರು. ಹಂಸಭಾವಿಯಂತಹ ಸಣ್ಣ ಪಟ್ಟಣದಲ್ಲಿ ಉದ್ಯೋಗ ಮಾಡಿದರೂ, ಜಿಲ್ಲೆಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದರು. ಶಿಸ್ತು, ಸಮಯಪಾಲನೆ, ಮತ್ತು ಬದ್ಧತೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಮೂಲತಃ ಸಂಶೋಧಕರಾಗಿದ್ದರೂ, ಧಾರ್ಮಿಕತೆಯನ್ನು ಅಳವಡಿಸಿಕೊಂಡಿದ್ದರು. ಅವರ ದತ್ತಿನಿಧಿ ಕಾರ್ಯಕ್ರಮದ ಮೂಲಕ ಸಂಶೋಧನೆಗೆ ಹೆಚ್ಚಿನ ಮನ್ನಣೆ ನೀಡಿದಂತಾಗುತ್ತದೆ ಎಂದು ಹೇಳಿದರು.ದತ್ತಿದಾನಿ ಲೀಲಾವತಿ ಭೋಜರಾಜ ಪಾಟೀಲ ಮಾತನಾಡಿದರು. ಸಾಹಿತಿ ಸತೀಶ ಕುಲಕರ್ಣಿ ದತ್ತಿದಾನಿಗಳನ್ನು ಪರಿಚಯಿಸಿದರು. ಗಾಯತ್ರಿ ನಾಯಕ ಅತಿಥಿಗಳ ಪರಿಚಯ ಮಾಡಿದರು. ಸಮಾರಂಭದಲ್ಲಿ ಡಾ. ಗುಹೇಶ್ವರ ಪಾಟೀಲ, ಪರಶುರಾಮ ಕರ್ಜಗಿ, ಸಿ.ಎಸ್. ಮರಳಿಹಳ್ಳಿ, ಶಂಕರ ಸುತಾರ, ಮಾಲತೇಶ ಕರ್ಜಗಿ, ನಾಗರಾಜ ಹುಡೇದ, ಪೃಥ್ವಿರಾಜ ಬೆಟಗೇರಿ, ರೇಣುಕಾ ಗುಡಿಮನಿ, ಅಕ್ಕಮಹಾದೇವಿ ಹಾನಗಲ್ಲ, ಮಾಲತೇಶ ಮರಿಗೂಳಪ್ಪನವರ, ಈರಣ್ಣ ಬೆಳವಡಿ, ಶಿವಬಸವ ಮರಳಿಹಳ್ಳಿ, ಜೆ.ಎಂ. ಓಂಕರಣ್ಣನವರ, ಜೆ.ಬಿ. ಸಾವಿರಮಠ, ವಿ.ಎಂ ಪತ್ರಿ, ಮುರುಗೆಪ್ಪ ಶೆಟ್ಟರ, ಶಿವಯೋಗಿ ಬೆನ್ನೂರ, ಮತ್ತಿತರರು ಉಪಸ್ಥಿತರಿದ್ದರು.ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು. ಎಸ್.ಆರ್. ಹಿರೇಮಠ ಸ್ವಾಗತಿಸಿದರು. ಪುಷ್ಪಾ ಶಲವಡಿಮಠ ನಿರೂಪಿಸಿದರು. ಡಾ. ಅಶ್ವಿನಿ ಪಾಟೀಲ ವಂದಿಸಿದರು.