ಬಸ್‌ ಪ್ರಯಾಣ ದರ ಏರಿಕೆ ಖಂಡಿಸಿ ರಾಣಿಬೆನ್ನೂರಲ್ಲಿ ಜೆಡಿಎಸ್‌ ಪ್ರತಿಭಟನೆ

| Published : Jan 09 2025, 12:47 AM IST

ಬಸ್‌ ಪ್ರಯಾಣ ದರ ಏರಿಕೆ ಖಂಡಿಸಿ ರಾಣಿಬೆನ್ನೂರಲ್ಲಿ ಜೆಡಿಎಸ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಾತ್ಯತೀತ ಜನತಾ ದಳದ (ಜೆಡಿಎಸ್) ಕಾರ್ಯಕರ್ತರು ಬುಧವಾರ ರಾಣಿಬೆನ್ನೂರು ನಗರದಲ್ಲಿ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್‌ ಅರುಣ ಕಾರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಾತ್ಯತೀತ ಜನತಾ ದಳದ (ಜೆಡಿಎಸ್) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್‌ ಅರುಣ ಕಾರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಶೇ. 15ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲಾಗದೇ ಈ ರೀತಿ ಪ್ರಯಾಣ ದರ ಹೆಚ್ಚಿಸಿರುವುದು ಜನಸಾಮಾನ್ಯರಿಗೆ ಸಂಕಷ್ಟ ಉಂಟು ಮಾಡಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಕೂಡ ಹಾಕಿಲ್ಲ. ಇದನ್ನೆಲ್ಲ ಗಮನಿಸಿದರೆ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಇದನ್ನು ಸರಿದೂಗಿಸಲು ಪ್ರಯಾಣ ದರ ಏರಿಕೆ ಮಾಡಿರುವುದು ಯಾವು ಪುರುಷಾರ್ಥಕ್ಕೆ? ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ದರ ಹೆಚ್ಚಳ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಮಾಧ್ಯಮ ವಕ್ತಾರ ಮಹೇಶಗೌಡ ಮಾತನಾಡಿ, ಬಿಜೆಪಿ ಭ್ರಷ್ಟಾಚಾರ ವಿರೋಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಮೀರಿಸುವ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ 169 ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ ಅಥವಾ ಜಿಲ್ಲೆಯ ಶಾಸಕರಾಗಲಿ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಇದೀಗ ಬಸ್ ದರ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷ ಚಂದ್ರಗೌಡ ಭರಮಗೌಡ್ರ, ನಗರ ಘಟಕ ಅಧ್ಯಕ್ಷ ರಮೇಶ ಮಾಕನೂರ, ದೀಪಾ ದಳವಾಯಿ, ಐಶ್ವರ್ಯ ಮಡಿವಾಳರ, ಗಂಗು ಹುಚ್ಚಂಗಿ, ಸಿದ್ದಣ್ಣ ಗುಡಿಹಿಂದ್ಲರ, ವಿಠ್ಠಲ ಸುಣಗಾರ, ಉಜ್ಜಪ್ಪ ಹಲಗೇರಿ, ನಿಂಗಣ್ಣ ಸಣ್ಣಕೊಟ್ರಪ್ಪನವರ, ದಾವಲ್ ಮಲೀಕ್ ನದಾಫ, ಇಬ್ರಾಹಿಂ ಯಲಗಚ್ಛ, ರಮೇಶ ಪೂಜಾರ, ರವೀಂದ್ರ ಶಿವಪ್ಪನವರ, ಮಾಲತೇಶ ಬಡಿಗೇರ, ಮೌನೇಶ ಮನ್ವಾಚಾರಿ, ರುದ್ರಣ್ಣ ಮಾಳೇನಹಳ್ಳಿ ಮತ್ತಿತರರಿದ್ದರು.