ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಪಪಂ ಕೊನೆಯ ಅವಧಿಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆ. 20ರಂದು ಚುನಾವಣೆ ನಡೆಯಲಿದ್ದು, ಪಟ್ಟಣದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮುಖಂಡರ ದುಂಬಾಲು ಬಿದ್ದಿದ್ದಾರೆ.ಒಟ್ಟು ೧೮ ಸದಸ್ಯರ ಪಪಂನಲ್ಲಿ ಕಾಂಗ್ರೆಸ್ ೧೧ ಸ್ಥಾನ ಹೊಂದಿದ್ದು, ಪೂರ್ಣ ಬಹುಮತ ಹೊಂದಿದೆ. ಬಿಜೆಪಿ ಕೇವಲ ೭ ಸದಸ್ಯರನ್ನು ಹೊಂದಿದೆ. ಈಗ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವುದರಿಂದ ಅಚ್ಚರಿಯ ರೀತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ಎಸ್ಸಿ ಮಹಿಳೆ ಮತ್ತು ಓರ್ವ ಅಲ್ಪ ಸಂಖ್ಯಾತ ಮಹಿಳೆಯ ಹೆಸರು ಮುನ್ನೆಲೆಗೆ ಬಂದಿದೆ.
ಶಿರಹಟ್ಟಿ ಪಪಂ ಆದ ನಂತರ ಇಲ್ಲಿಯವರೆಗೂ ಅಧ್ಯಕ್ಷ ಸ್ಥಾನ ಈ ಎರಡು ವರ್ಗದ ಮಹಿಳೆಯರಿಗೂ ಲಭಿಸಿಲ್ಲ. ಇದೇ ಮೊದಲ ಬಾರಿ ಎಸ್ಸಿ ಮಹಿಳೆ ಮತ್ತು ಅಲ್ಪಸಂಖ್ಯಾತ ಮಹಿಳೆ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೊರಗೆಡವಿದ್ದು, ಇದು ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ ಎನ್ನಬಹುದು. ಇವರಿಬ್ಬರಲ್ಲದೇ ಮತ್ತೋರ್ವ ಕಾಂಗ್ರೆಸ್ ಸದಸ್ಯೆ ನೀಲವ್ವ ಹುಬ್ಬಳ್ಳಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೊಡ್ಡುವ ಲಕ್ಷಣ ಕಂಡುಬರುತ್ತಿವೆ.ಕಾಂಗ್ರೆಸ್‌ನಲ್ಲಿ ನೀಲವ್ವ ಹುಬ್ಬಳ್ಳಿ, ಗಂಗವ್ವ ಆಲೂರ ಮಹಿಳಾ ಸದಸ್ಯರು ಮೊದಲ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದು, ಈ ಅವಕಾಶ ನಮಗೆ ಕೈ ತಪ್ಪಬಾರದು ಎನ್ನುವ ಕಾರಣದಿಂದ ವಾರ್ಡ್ ನಂ.೧೫ ರಿಂದ ಆಯ್ಕೆಯಾದ ದೇವಕ್ಕ ಗುಡಿಮನಿ ಮತ್ತು ವಾರ್ಡ್ ನಂ ೧೧ರಿಂದ ಆಯ್ಕೆಯಾದ ದಾವಲಬಿ ಮಾಚೇನಹಳ್ಳಿ ಇವರಿಬ್ಬರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ, ನಮಗೂ ಒಂದು ಅವಕಾಶ ನೀಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಮುಖಂಡರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ೭ಸ್ಥಾನ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಸಂಖ್ಯಾಬಲ ಇಲ್ಲದ್ದರಿಂದ ಕಾಂಗ್ರೆಸ್‌ನಲ್ಲಿನ ಒಳಬೇಗುದಿಯ ಲಾಭ ಪಡೆಯುವ ನಿಟ್ಟಿನಲ್ಲಿ ಏನಾದರೂ ಬಲೆ ಬಿಸಿ ಕಾಂಗ್ರೆಸ್‌ನವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿರುವುದರಿಂದ ಅವರೂ ಕೂಡ ಕುದುರೆ ವ್ಯಾಪಾರಕ್ಕೆ ಮುಂದಾಗಿರುವುದು ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ.ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಜಿಲ್ಲೆಯಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಮತ್ತು ಶಕ್ತಿಯಿಂದ ಸದಸ್ಯರ ಕುದುರೆ ವ್ಯಾಪಾರ ಅಸಾಧ್ಯ. ಆದರೆ ಕಾಂಗ್ರೆಸ್‌ನಲ್ಲಿಯೂ ಅಸಮಾಧಾನದ ಹೊಗೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹೆಚ್ಚು ಆಸಕ್ತಿ ತೋರದೇ ಹೋದರೆ ಮತ್ತೊಮ್ಮೆ ಪಪಂ ಬಿಜೆಪಿ ತೆಕ್ಕೆಗೆ ಸೇರುವುದು ನಿಶ್ಚಿತ.
ಒಂದೊಮ್ಮೆ ಪ್ರಬಲ ಪೈಪೋಟಿ ಉಂಟಾಗಿ ಭಿನ್ನಮತ ಏರ್ಪಟ್ಟು ಅಸಮಾಧಾನ ಸ್ಪೋಟಗೊಂಡರೆ ಬಿಜೆಪಿ ಯಾವ ರೀತಿ ಇದರ ಲಾಭ ಪಡೆಯುತ್ತದೆ ಎಂಬುದು ಬಿಜೆಪಿ ಮುಖಂಡರು ರೂಪಿಸುವ ಕಾರ್ಯತಂತ್ರದ ಮೇಲೆ ಅವಲಂಭಿತವಾಗಿದೆ. ಏಕೆಂದರೆ ಓರ್ವ ಶಾಸಕರು ಮತ್ತು ಸಂಸದರೂ ಸಹ ಮತದಾನ ಮಾಡುವ ಹಕ್ಕು ಹೊಂದಿರುವುದರಿಂದ ಪರಿಸ್ಥಿತಿ ಉಲ್ಟಾಪಲ್ಟಾ ಆಗುವ ಸಾಧ್ಯತೆ ಇದೆ.ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದೆ. ನಾಲ್ಕು ಜನ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಉಳ್ಳವರಿರುವುದರಿಂದ ಪಕ್ಷದ ಹಿರಿಯರ ಗಮನಕ್ಕೆ ತಂದು ಯಾವುದೇ ಗೊಂದಲಕ್ಕೆ ಅಸ್ಪದ ಬರದಂತೆ ಅಧಿಕಾರ ಹಂಚಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಇಬ್ಬರು ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು, ಶಾಸಕರ ಮತ್ತು ಸಂಸದರ ಬೆಂಬಲ ಸಿಕ್ಕರೂ ಇನ್ನೂ ಎರಡು ಮತಗಳ ಕೊರತೆ ಬರುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.