ರಾಜ್ಯಪಾಲರ ಟೀಕೆ ಸಂವಿಧಾನ ವಿರೋಧಿ: ಸುನಿಲ್ ಕುಮಾರ್

| Published : Aug 18 2024, 01:49 AM IST

ರಾಜ್ಯಪಾಲರ ಟೀಕೆ ಸಂವಿಧಾನ ವಿರೋಧಿ: ಸುನಿಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸಿಗರಿಗೆ ಬೇಕಾದಂತೆ ನಡೆದರೆ ರಾಜ್ಯಪಾಲರು ಒಳ್ಳೆಯವರು, ಇಲ್ಲವಾದರೆ ಕೆಟ್ಟವರು ಎಂಬ ಮನೋಭಾವ ಸರಿಯಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಪಡೆದ ಮೇಲೆ ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್‌ನವರು ಅವರ ವಿರುದ್ಧ ಮಾಡುತ್ತಿರುವ ಅನಗತ್ಯ ಟೀಕೆ ಸಂವಿಧಾನ ವಿರೋಧಿ ನಡೆಯಾಗಿದೆ. ಇದಕ್ಕೆ ಅವಕಾಶ ನೀಡಬಾರದು. ಇಲ್ಲದಿದ್ದಲ್ಲಿ ಇಂದು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಳೆ ನ್ಯಾಯಾಲಯವನ್ನೂ ಪ್ರಶ್ನಿಸಬಹುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ತಮ್ಮ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನೇ ಮುಚ್ಚಿದವರು. ಈಗ ರಾಜ್ಯಪಾಲರೇ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು, ಅವರು ಸಿಎಂ ಕುರ್ಚಿಯಲ್ಲಿ ಒಂದು ಕ್ಷಣವೂ ಕೂರಲು ಅರ್ಹರಲ್ಲ. ರಾಜ್ಯದಲ್ಲಿ ಅವರ ವಿರುದ್ಧ ಆಂದೋಲನ ಆರಂಭವಾಗುವ ಮೊದಲು ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು. ಆರೋಪ ಸಾಬೀತಾಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ನಮ್ಮದೇನೂ ತಕರಾರಿಲ್ಲ ಎಂದರು.

ಕಾಂಗ್ರೆಸಿಗರಿಗೆ ಬೇಕಾದಂತೆ ನಡೆದರೆ ರಾಜ್ಯಪಾಲರು ಒಳ್ಳೆಯವರು, ಇಲ್ಲವಾದರೆ ಕೆಟ್ಟವರು ಎಂಬ ಮನೋಭಾವ ಸರಿಯಲ್ಲ. ರಾಜ್ಯಪಾಲರಿಗೆ ಮೂರು ದೂರುಗಳನ್ನು ಸಲ್ಲಿಸಿದ್ದು ಬಿಜೆಪಿಯಲ್ಲ, ಹಗರಣದ ಬಗ್ಗೆ ಕೇಳಿದಾಗ ರಾಜ್ಯಪಾಲರಿಗೆ ವಿವರಣೆ ಕೊಡದ ಸರ್ಕಾರ, ಸಿಎಂ ಸಿದ್ದರಾಮಯ್ಯ ರಾಜ್ಯದ ರಾಜಕೀಯ ಪರಂಪರೆಯ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಹೇಳಿದರು.

* 19ರಂದು ಬಿಜೆಪಿ ಪ್ರತಿಭಟನೆ

ನೈತಿಕತೆ, ಸಿದ್ಧಾಂತ ಪ್ರತಿಪಾದಕರಾದ ಸಿದ್ದರಾಮಯ್ಯ ರಾಜೀನಾಮೆ ನೀಡದೆ ಭಂಡತನದ ಪರಮಾವಧಿಯನ್ನು ತೋರಿಸುತಿದ್ದಾರೆ. ಆದ್ದರಿಂದ ಬಿಜೆಪಿ ಆ.19ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನಲ್ಲಿ ಶಾಸಕರು ಹಾಗೂ ಜಿಲ್ಲಾಮಟ್ಟದಲ್ಲಿ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸುನಿಲ್ ಕುಮಾರ್ ಪ್ರಕಟಿಸಿದರು.