ಸಾರಾಂಶ
20ರಿಂದ ಗುಬ್ಬಿ ಗ್ರಾಮದೇವತೆ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಇದೇ ತಿಂಗಳ 20 ರಿಂದ 22ರ ವರೆಗೆ ಹದಿನೆಂಟು ಕೋಮಿನ ಆರತಿ ಪೂಜೆ ಮೂಲಕ ವಿಧಿವತ್ತಾಗಿ ನಡೆಯಲಿದೆ ಎಂದು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ ತಿಳಿಸಿದ್ದಾರೆ.ಆ 20 ರ ಮಂಗಳವಾರ ಅಮ್ಮನವರನ್ನು ದೇವಾಲಯದಿಂದ ಮೆರವಣಿಗೆ ಮೂಲಕ ಹಳೇ ಸಂತೆಮೈದಾನದ ಗದ್ದುಗೆ ಸ್ಥಳಕ್ಕೆ ಕರೆ ತಂದು ಅನುಷ್ಠಾನ ಮಾಡಲಾಗುತ್ತದೆ. ಪ್ರತಿಷ್ಠಾಪನೆ ನಂತರ ಬ್ರಾಹ್ಮಣ, ವೀರಶೈವ, ಒಕ್ಕಲಿಗರು, ಅಗ್ನಿವಂಶ ಕ್ಷತ್ರಿಯ, ಆರ್ಯವೈಶ್ಯರು, ರಾಜು ಕ್ಷತ್ರಿಯ ಹೀಗೆ ಹಲವು ಸಮಾಜದ ಆರತಿ ಪೂಜೆ ನೆರವೇರಲಿದೆ ಎಂದು ಹೇಳಿದ್ದಾರೆ.
ಆ 21 ರಂದು ಜಾತ್ರೆಯ ಎರಡನೇ ದಿನವಾಗಿ ವಾಲ್ಮೀಕಿ, ಮಡಿವಾಳ, ಭೋವಿ ಸಮುದಾಯದ ಆರತಿ ಪೂಜೆ ಮುಂದುವರೆಯಲಿದೆ. ಆ 22 ರಂದು ಜಾತ್ರೆಯ ಅಂತಿಮ ದಿನವಾಗಿ ಯಾದವರ ಬಾನಪೂಜೆ, ಈಡಿಗರ ಘಟೆಸೇವೆ, ನಂತರ ಯಾದವರು, ಆದಿ ದ್ರಾವಿಡ, ಆದಿ ಕರ್ನಾಟಕ ಆರತಿ ಪೂಜೆ ಜರುಗಲಿದ್ದು, ಸಂಜೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಊರಿನ ಹೊರವಲಯದ ಬನದಲ್ಲಿನ ಗದ್ದುಗೆಯಲ್ಲಿರಿಸಿ ಬಿಜಂಗೈಯುವ ಕಾರ್ಯ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.